ADVERTISEMENT

ರಾಮಮಂದಿರ ಶಿಲಾನ್ಯಾಸ ಸಮಾರಂಭಕ್ಕೆ ಪ್ರಧಾನಿಯಾಗಿ ಮೋದಿ ಪಾಲ್ಗೊಳ್ಳಬಾರದು: ಓವೈಸಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 14:07 IST
Last Updated 28 ಜುಲೈ 2020, 14:07 IST
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ    

ಹೈದರಾಬಾದ್: ಆಗಸ್ಟ್ 5 ರಂದು ನಡೆಯಲಿರುವ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಭಾಗವಹಿಸಬಾರದು ಎಂದು ಆಲ್ ಇಂಡಿಯಾ ಮಜಿಲಿಸ್ -ಇ-ಇತ್ತೆಹುದುಲ್ ಮುಸ್ಲೀಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಂಗಳವಾರ ಹೇಳಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರು ಆ ಕಾರ್ಯಕ್ರಮಕ್ಕೆ ಹಾಜರಾಗಬಾರದು ಎಂದು ಔಟ್‌ಲುಕ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದೇನೆ. ಏಕೆಂದರೆ ಅವರು ಪ್ರಧಾನ ಮಂತ್ರಿಯಾಗಿ ಆ ಕಾರ್ಯಕ್ರಮಕ್ಕೆ ಹಾಜರಾದರೆ, ದೇಶದಲ್ಲಿ ಪ್ರಧಾನಿ ಒಂದು ನಂಬಿಕೆಯನ್ನುಳ್ಳ ವರ್ಗದ ಜನರಿಗೆ ಮಾತ್ರ ಬೆಂಬಲ ನೀಡುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ' ಎಂದು ಓವೈಸಿ ತಿಳಿಸಿದ್ದಾರೆ.

'ತಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ಅವರು ಹೇಳಿದರೆ, ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಪ್ರತಿ ಪ್ರಧಾನ ಮಂತ್ರಿಯೂ ಕೂಡ ಒಂದು ಧರ್ಮವನ್ನು ಅನುಸರಿಸುವ ಹಕ್ಕನ್ನು ಹೊಂದಿರುತ್ತಾರೆ. ಆದರೆ ಪ್ರಧಾನಮಂತ್ರಿ ಸಾಂವಿಧಾನಿಕ ಮುಖ್ಯಸ್ಥರಾಗಿರುತ್ತಾರೆ ಮತ್ತು ಸಂವಿಧಾನವು ಜಾತ್ಯತೀತತೆಯ ಮೂಲ ರಚನೆಗೆ ಸಂಬಂಧಿಸಿದೆ' ಎಂದು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಪ್ರಧಾನಿ 'ಅವರು ತಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಲೇಬೇಕು ಮತ್ತು ಯಾವುದೇ ಟಿವಿ ಚಾನೆಲ್‌ಗಳು ಅದನ್ನು ನೇರ ಪ್ರಸಾರ ಮಾಡಬಾರದು' ಎಂದು ಅವರು ಹೇಳಿದರು.

'ದೇಶಕ್ಕೆ ಯಾವುದೇ ಧರ್ಮವಿಲ್ಲ. ಭಾರತ ಮತ್ತು ಭಾರತ ಸರ್ಕಾರಕ್ಕೆ ಧರ್ಮವಿದೆಯೇ? ಅವರು ಮುಸ್ಲಿಮರು, ಹಿಂದೂಗಳು, ದಲಿತರು, ಹಿಂದುಳಿದವರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ದೇವರನ್ನೇ ನಂಬದವರಿಗೂ ಅವರು ಪ್ರಧಾನಿ' ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ತಿಳಿಸಿದ್ದಾರೆ.

ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಸಂಪುಟದ ಸಚಿವರು ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಹ ಭಾಗವಹಿಸುವ ಸಾಧ್ಯತೆಯಿರುವ ಭೂಮಿ ಪೂಜೆ ನೇರವೇರಿಸುವ ಸಮಾರಂಭದ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸ್ಥಾಪಿಸಲಾದ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ತಿಂಗಳ ಆರಂಭದಲ್ಲಿ ತನ್ನ ಎರಡನೇ ಸಭೆಯನ್ನು ನಡೆಸಿತು. ಈ ವರ್ಷದ ಮಾರ್ಚ್‌ನಲ್ಲಿ 'ರಾಮ್ ಲಲ್ಲಾ' ವಿಗ್ರಹವನ್ನು ರಾಮ ಮಂದಿರದ ತಾತ್ಕಾಲಿಕ ಮಂದಿರಕ್ಕೆ ಸ್ಥಳಾಂತರಿಸಲಾಯಿತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.