ADVERTISEMENT

ಅಟಲ್ ಸುರಂಗ ಮಾರ್ಗ: ಪ್ರಧಾನಿ ಮೋದಿ ಚಾಲನೆಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 3:08 IST
Last Updated 3 ಅಕ್ಟೋಬರ್ 2020, 3:08 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಶಿಮ್ಲಾ:ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್ ಅನ್ನು ಸಂಪರ್ಕಿಸುವ ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಶನಿವಾರ ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟನೆ ಮಾಡಲಿದ್ದು ಈ ಐತಿಹಾಸಿಕ ಘಟನೆಗೆ ಕ್ಷಣಗಣನೆ ಆರಂಭವಾಗಿದೆ.

ಹಿಮಾಚಲ ಪ್ರದೇಶದ ರೋಹ್ಟಾಂಗ್‌ನಲ್ಲಿ ನಡೆಯುವ ಸುರಂಗ ಮಾರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ, ಪ್ರಧಾನಿಯವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆ ಉದ್ಘಾಟನ ಕಾರ್ಯ ನೆರವೆರಲಿದೆ.

ಮನಾಲಿಯನ್ನು ಲೇಹ್‌ಗೆ ಸಂಪರ್ಕಿಸುವ9.02 ಕಿ.ಮೀ ಉದ್ದದ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ. ಈ ಮಾರ್ಗ ಮನಾಲಿ–ಲೇಹ್‌ ನಡುವಿನ ದೂರವನ್ನು 46. ಕಿ.ಮೀ ನಷ್ಟು ಕಡಿತಗೊಳಿಸುವ ಜತೆಗೆ, ನಾಲ್ಕರಿಂದ ಐದು ಗಂಟೆಗಳವರೆಗೆ ಪ್ರಯಾಣದ ಅವಧಿಯನ್ನು ಕಡಿತಗೊಳಿಸಲಿದೆ.

ADVERTISEMENT

ಈ ಹಿಂದೆ ವರ್ಷದಲ್ಲಿ ಆರು ತಿಂಗಳು ಈ ಮಾರ್ಗದಲ್ಲಿ ಹಿಮಪಾತವಾಗುತ್ತಿದ್ದರಿಂದ, ಅರ್ಧ ವರ್ಷ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿತ್ತು. ಈಗ ಸುರಂಗ ನಿರ್ಮಾಣವಾಗಿರುವುದರಿಂದ,ವರ್ಷಪೂರ್ತಿ ಮನಾಲಿಯಿಂದ ಲಹೌಲ್‌ – ಸ್ಪಿತಿ ಕಣಿವೆಗೆ ಸಂಚರಿಸಬಹುದಾಗಿದೆ.

ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ (ಎಂಎಸ್ಎಲ್) 3,000 ಮೀಟರ್ (10,000 ಅಡಿ) ಎತ್ತರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಸುರಂಗವನ್ನು ನಿರ್ಮಿಸಲಾಗಿದೆ.

ಈ ಸುರಂಗವನ್ನು ಪೂರ್ಣಗೊಳಿಸಲು ಅಂದಾಜು ಅವಧಿ 6 ವರ್ಷಗಳಿಗಿಂತ ಕಡಿಮೆಯಿತ್ತು. ಆದರೆ ಇದು 10 ವರ್ಷಗಳಲ್ಲಿ ಪೂರ್ಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.