ADVERTISEMENT

ಸಾಬರಮತಿ ಆಶ್ರಮಕ್ಕೆ ಪ್ರಧಾನಿ ಮೋದಿ ಭೇಟಿ: ಗಾಂಧೀಜಿಗೆ ಗೌರವ ನಮನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 6:58 IST
Last Updated 12 ಮಾರ್ಚ್ 2021, 6:58 IST
ಸಾಬರಮತಿ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (ಚಿತ್ರ ಕೃಪೆ: ಗುಜರಾತ್ ಮಾಹಿತಿ ಇಲಾಖೆ)
ಸಾಬರಮತಿ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (ಚಿತ್ರ ಕೃಪೆ: ಗುಜರಾತ್ ಮಾಹಿತಿ ಇಲಾಖೆ)   

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದರು.

ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಗೌರವ ನಮನ ಸಲ್ಲಿಸಿದ ಪ್ರಧಾನಿ, ಬಳಿಕ ಸಂದರ್ಶಕರ ಪುಸ್ತಕದಲ್ಲಿ ಅಭಿಪ್ರಾಯ ನಮೂದಿಸಿದರು.

ಮೋದಿ ಅವರು ಸಾಬರಮತಿ ಆಶ್ರಮದಲ್ಲಿ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದ ನೆನಪಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜತೆಗೆ, ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಮ್ಮಿಕೊಂಡಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ್‌’ಗೆ ಚಾಲನೆ ನೀಡಲಿದ್ದಾರೆ.

ADVERTISEMENT

ಅಭಯ್ ಘಾಟ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ವಿಜಯ್ ರೂಪಾಣಿ, ಗುಜರಾತ್ ರಾಜ್ಯಪಾಲರು, ಇತರ ಸಚಿವರು, ಬಿಜೆಪಿ ನಾಯಕರು ಸರ್ಕಾರಿ ಅಧಿಕಾರಿಗಳು ಹಾಗೂ ಗುಜರಾತ್ ವಿದ್ಯಾಪೀಠದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬ್ರಿಟಿಷ್ ಸರ್ಕಾರವು ಉಪ್ಪಿನ ಕಾಯ್ದೆಯನ್ನು ಹಿಂಪಡೆಯುವಂತೆ ಮಾಡಿದ್ದ ‘ದಂಡಿ ಯಾತ್ರೆ’ಯ 91ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. 81 ಮಂದಿ ಯುವಕರ ತಂಡವು 1930ರಲ್ಲಿ ಮಹಾತ್ಮ ಗಾಂಧಿ ಅವರು ಯಾತ್ರೆ ನಡೆಸಿದ್ದ ಅದೇ ಹಾದಿಯಲ್ಲಿ ಯಾತ್ರೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.