ADVERTISEMENT

ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಹೊಂದುವ ಒಮರ್‌ ಅಬ್ದುಲ್ಲಾ ಮಾತಿಗೆ ಮೋದಿ ಕಿಡಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 5:21 IST
Last Updated 2 ಏಪ್ರಿಲ್ 2019, 5:21 IST
   

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಮಾಡಿಕೊಳ್ಳುತ್ತೇವೆ ಎಂಬ ನ್ಯಾಷನಲ್‌ ಕಾನ್ಫರೆನ್ಸ್‌ನ ಮುಖ್ಯಸ್ಥ ಒಮರ್‌ ಅಬ್ದುಲ್ಲಾ ಅವರ ಹೇಳಿಕೆಗೆ ಮೋದಿ ಕಿಡಿಯಾಗಿದ್ದಾರೆ. ತನ್ನ ಮಿತ್ರಪಕ್ಷವಾಗಿರುವ ನ್ಯಾಷನಲ್‌ ಕಾನ್ಫರೆನ್ಸ್‌ನ ಈಅಭಿಪ್ರಾಯದ ಬಗ್ಗೆ ಕಾಂಗ್ರೆಸ್‌ ಉತ್ತರಿಸಬೇಕೆಂದೂ ಮೋದಿ ಆಗ್ರಹಿಸಿದ್ದಾರೆ.

'ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕ ಪ್ರಧಾನಿ ಇದ್ದ 1953ರ ಕಾಲಕ್ಕೆ ದೇಶದ ಗಡಿಯಾರವನ್ನು ಹಿಮ್ಮುಖವಾಗಿ ತಿರುಗಿಸಲು ಕಾಂಗ್ರೆಸ್‌ನ ಮಿತ್ರ ಪಕ್ಷ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಯತ್ನಿಸುತ್ತಿದೆ. ಕಾಶ್ಮೀರದಲ್ಲಿ ತನ್ನ ಮಿತ್ರಪಕ್ಷವಾಗಿರುವನ್ಯಾಷನಲ್‌ ಕಾನ್ಫರೆನ್ಸ್‌ನ ಈ ಅಭಿಪ್ರಾಯದ ಬಗ್ಗೆ ಮಹಾಘಟಬಂಧನದ ಪ್ರಧಾನ ಪಕ್ಷವಾಗಿರುವ ಕಾಂಗ್ರೆಸ್‌ ತನ್ನ ನಿಲುವು ಸ್ಪಷ್ಟಪಡಿಸಬೇಕು. ಈ ಬೇಡಿಕೆಯನ್ನು ಕಾಂಗ್ರೆಸ್‌ ಒಪ್ಪುತ್ತದೆಯೇ,' ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ನ್ಯಾಷನಲ್‌ ಕಾನ್ಫರೆನ್ಸ್‌ಇಂಥ ಬೇಡಿಕೆಯ ಸೊಲ್ಲೆತ್ತಲು ತೋರಿದ ಧೈರ್ಯದ ಬಗ್ಗೆ ಉತ್ತರಿಸುವ ಹೊಣೆ ಕಾಂಗ್ರೆಸ್‌ನದ್ದು ಎಂದೂ ಅವರು ಹೇಳಿದ್ದಾರೆ.

ADVERTISEMENT

ಇತ್ತೀಚೆಗೆ ಜಮ್ಮು ಕಾಶ್ಮೀರದ ಬಂಡಿಪೋರ ಎಂಬಲ್ಲಿ ನಡೆಯುತ್ತಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ನ ಸಮಾವೇಶದಲ್ಲಿ ಮಾತನಾಡಿದ್ದ ಒಮರ್‌ ಅಬ್ದುಲ್ಲಾ, 'ಸ್ವಾತಂತ್ರ್ಯಾ ನಂತರದ ಕಾಲದಲ್ಲಿ ರಾಜಾಳ್ವಿಕೆ ಪ್ರದೇಶಗಳು ಯಾವುದೇ ಷರತ್ತುಗಳಿಲ್ಲದೇ ಭಾರತದೊಳಗೆ ವಿಲೀನಗೊಂಡವು. ಆದರೆ, ಜಮ್ಮು ಮತ್ತು ಕಾಶ್ಮೀರ ಮಾತ್ರ ತನ್ನ ಅಸ್ಮಿತೆಯನ್ನು ಪ್ರತ್ಯೇಕವಾಗಿಯೇ ಉಳಿಸಿಕೊಳ್ಳುವ ಮತ್ತು ಪ್ರತ್ಯೇಕ ಸಂವಿಧಾನ ಹೊಂದುವ ಷರತ್ತಿನೊಂದಿಗೆ ವಿಲೀನಾವಾಯಿತು. ನಮಗೆ ಪ್ರತ್ಯೇಕ ಪ್ರಧಾನಿ, ರಾಷ್ಟ್ರಪತಿಗಳೂ ಇದ್ದರು. ದೇವರ ಆಶೀರ್ವಾದದೊಂದಿಗೆ ನಾವು ಮರಳಿ ಪ್ರತ್ಯೇಕ ಪ್ರಧಾನಿಯನ್ನು ಹೊಂದಲಿದ್ದೇವೆ,’ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಮೋದಿ ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕ ಒಮರ್‌ ಅಬ್ದುಲ್ಲಾ ಮತ್ತು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದರು.

ಇನ್ನು ಮೋದಿ ಅವರಿಂದ ಟೀಕೆ ವ್ಯಕ್ತವಾಗುತ್ತಲೇ ಸೋಮವಾರ ಟ್ವೀಟ್‌ ಮಾಡಿರುವ ಒಮರ್‌ ಅಬ್ದುಲ್ಲಾ, '1947ರಲ್ಲಿ ಮಹಾರಾಜ ಹರಿಸಿಂಗ್‌ ಭಾರತಕ್ಕೆ ಹಾಕಿದ್ದ ಷರತ್ತುಗಳನ್ನು ಮರುಸ್ಥಾಪಿಸುವುದರ ಪರವಾದ ನಿಲುವನ್ನು ನ್ಯಾಷನಲ್‌ ಕಾನ್ಫರೆನ್ಸ್‌ ಹೊಂದಿದೆ. ನಮ್ಮ ಪಕ್ಷದ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲು ಕಾಂಗ್ರೆಸ್‌ ಸೇರಿದಂತೆ ಇತರ ಮಿತ್ರ ಪಕ್ಷಗಳುಹಿಂಜರಿಕೆಪಡಬೇಕಿಲ್ಲ,' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಸಂವಿಧಾನದ ವಿಧಿ 370ರ ಅಡಿಯಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಲಾಗಿದೆ. ಅಲ್ಲದೆ, ಪರಿಚ್ಛೇದ 35(ಎ) ಅಡಿಯಲ್ಲಿ ಅಲ್ಲಿನ ನಾಗರಿಕರಿಗೆ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಕೊಡಮಾಡಲಾಗಿದೆ. ಸದ್ಯ ಇವುಗಳನ್ನು ರದ್ದು ಮಾಡುವ ಕುರಿತು ಜಮ್ಮು ಕಾಶ್ಮೀರದಲ್ಲಿ ಭಾರಿ ಪ್ರತಿರೋಧವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.