ADVERTISEMENT

ಪುದುಚೇರಿ: ₹145 ಕೋಟಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ರಾಷ್ಟ್ರೀಯ ಯುವ ದಿನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2022, 2:43 IST
Last Updated 12 ಜನವರಿ 2022, 2:43 IST
ಪುದುಚೇರಿಯಲ್ಲಿ ನಿರ್ಮಾಣವಾಗಿರುವ ನೂತನ ರಂಗ ಮಂದಿರ
ಪುದುಚೇರಿಯಲ್ಲಿ ನಿರ್ಮಾಣವಾಗಿರುವ ನೂತನ ರಂಗ ಮಂದಿರ   

ನವದೆಹಲಿ: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಪುದುಚೇರಿಯಲ್ಲಿ ನಡೆಯಲಿರುವ 25ನೇ ರಾಷ್ಟ್ರೀಯ ಯುವ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. ಅದರೊಂದಿಗೆ ₹145 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಕೋವಿಡ್‌ ಕಾರಣಗಳಿಂದ ಇಂದು ಮತ್ತು ನಾಳೆ ವರ್ಚುವಲ್‌ ಆಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಧಾನಿ ಮೋದಿ ಇಂದು ಬೆಳಿಗ್ಗೆ 11ಕ್ಕೆ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಲಿದ್ದಾರೆ ಹಾಗೂ ₹122 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ತಂತ್ರಜ್ಞಾನ ಕೇಂದ್ರ ಹಾಗೂ ₹23 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ.

ಅತಿ ಸಣ್ಣ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ (ಎಂಎಸ್‌ಎಂಇ) ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿರುವ ತಂತ್ರಜ್ಞಾನ ಕೇಂದ್ರವು ವಾರ್ಷಿಕ ಸುಮಾರು 6,400 ಯುವಕರ ಕೌಶಲಾಭಿವೃದ್ಧಿ ಮತ್ತು ತರಬೇತಿಗೆ ಸಹಕಾರಿಯಾಗಲಿದೆ. 'ಪೆರುಂತಲೈವರ್‌ ಕಾಮರಾಜರ್‌ ಮಣಿಮಂಡಪಂ' ಹೆಸರಿನ ತೆರೆದ ರಂಗಮಂದಿರವನ್ನು ಒಳಗೊಂಡಿರುವ ಹೊಸ ಸಭಾಂಗಣವು ಉದ್ಘಾಟನೆಯಾಗಲಿದೆ. ಶೈಕ್ಷಣಿಕ ಉದ್ದೇಶಗಳಿಗೆ ಈ ಸಭಾಂಗಣ ಬಳಕೆಯಾಗಲಿದ್ದು, 1,000ಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ಕಲ್ಪಿಸಬಹುದಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯವು ಪ್ರಕಟಿಸಿದೆ.

ADVERTISEMENT

ಭಾರತದ ಭಿನ್ನ ಸಂಸ್ಕೃತಿಗಳು ಜೊತೆಗೂಡಿಸುವ ಉದ್ದೇಶವನ್ನು ರಾಷ್ಟ್ರೀಯ ಯುವ ದಿನವು ಒಳಗೊಂಡಿದ್ದು, ಈ ಮೂಲಕ 'ಏಕ ಭಾರತ್‌, ಶ್ರೇಷ್ಠ ಭಾರತ್' (ಒಂದೇ ಭಾರತ, ಶ್ರೇಷ್ಠ ಭಾರತ) ಕಡೆಗೆ ಕರೆದೊಯ್ಯುವುದೇ ಗುರಿ ಎಂದು ಪ್ರಕಟಣೆ ತಿಳಿಸಿದೆ.

ಸಂಜೆ 4ಕ್ಕೆ ತಮಿಳುನಾಡಿನಲ್ಲಿ 11 ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.