ADVERTISEMENT

ಮೋದಿಗೆ ಪರ್ಯಾಯ ರಾಹುಲ್‌ ಗಾಂಧಿಯಲ್ಲ, ಮಮತಾ ಬ್ಯಾನರ್ಜಿ: ಜಾಗೋ ಬಾಂಗ್ಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2021, 5:54 IST
Last Updated 18 ಸೆಪ್ಟೆಂಬರ್ 2021, 5:54 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಕೋಲ್ಕತ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯಲ್ಲ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂದು ತೃಣಮೂಲ ಕಾಂಗ್ರೆಸ್‌ನ ಮುಖವಾಣಿ 'ಜಾಗೋ ಬಾಂಗ್ಲಾ' ಶನಿವಾರದ ಮುಖಪುಟದಲ್ಲಿ ಪ್ರಧಾನ ಲೇಖನ ಪ್ರಕಟಿಸಿದೆ.

ಪರ್ಯಾಯ ನಾಯಕತ್ವದ ಬಗ್ಗೆ ಬುಧವಾರ ನಡೆದ ಟಿಎಂಸಿ ರಹಸ್ಯ ಸಭೆಯಲ್ಲಿ ಹಿರಿಯ ಮುಖಂಡರು ಚರ್ಚಿಸಿದ್ದಾರೆ ಎಂದು ಲೇಖನದಲ್ಲಿ ತಿಳಿಸಲಾದೆ. ಸಂಸದ ಸುದೀಪ್‌ ಬಂಡೋಪಾಧ್ಯಾಯ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಾಕಷ್ಟು ಅವಕಾಶಗಳು ಇದ್ದರೂ ಪ್ರಬಲ ವಿರೋಧ ಪಕ್ಷದ ನಾಯಕನಾಗಿ, ಮೋದಿಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವಾಗಿಲ್ಲ. ತೃಣಮೂಲ ಕಾಂಗ್ರೆಸ್‌ ಮಮತಾರನ್ನು ಮೋದಿಯ ಪರ್ಯಾಯ ನಾಯಕಿಯನ್ನಾಗಿ ಪ್ರಸ್ತುತ ಪಡಿಸಲು ಆರಂಭಿಸಲಿದೆ' ಎಂದಿರುವುದಾಗಿ ಲೇಖನದಲ್ಲಿ ಉಲ್ಲೇಖಿಸಿದೆ.

'ಬಹಳ ವರ್ಷಗಳಿಂದ ರಾಹುಲ್‌ ಗಾಂಧಿ ನನಗೆ ಗೊತ್ತು. ನರೇಂದ್ರ ಮೋದಿಗೆ ಪರ್ಯಾಯ ನಾಯಕನಾಗಿ ಬೆಳೆಯುವಲ್ಲಿ ಅವರು ವಿಫಲರಾಗಿದ್ದಾರೆ. ಇಡೀ ದೇಶವೇ ಮಮತಾ ಬ್ಯಾನರ್ಜಿ ಅವರನ್ನು ಬಯಸುತ್ತಿದೆ. ರಾಷ್ಟ್ರದ ಎಲ್ಲ ವಿರೋಧ ಪಕ್ಷಗಳ ಜೊತೆ ಮಮತಾ ಬ್ಯಾನರ್ಜಿ ಅವರನ್ನು ಪರ್ಯಾಯ ನಾಯಕಿಯಾಗಿ ಪ್ರಸ್ತುತ ಪಡಿಸಲು ಚರ್ಚಿಸುತ್ತೇವೆ' ಎಂದು ಲೇಖನದಲ್ಲಿ ಸುದೀಪ್‌ ಬಂಡೋಪಾಧ್ಯಾಯ ಅವರ ಹೇಳಿಕೆಯನ್ನು ದಾಖಲಿಸಿದೆ.

ADVERTISEMENT

'ಸೆಪ್ಟೆಂಬರ್‌ 15ರಂದು ನಡೆದ ಪಕ್ಷದ ರಹಸ್ಯ ಸಭೆಯಲ್ಲಿ ಹೇಳಬೇಕಾಗಿದ್ದನ್ನು ಹೇಳಿದ್ದೇನೆ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷದ ಪತ್ರಿಕೆಯಲ್ಲಿಯೂ ಪ್ರಕಟವಾಗಿದೆ. ಅದಕ್ಕೆ ಹೊರತಾಗಿ ಮಾತನಾಡುವುದು ಬೇರೇನು ಇಲ್ಲ' ಎಂದು ಬಂಡೋಪಾಧ್ಯಾಯ 'ಟೈಮ್ಸ್‌ ಆಫ್‌ ಇಂಡಿಯಾ'ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.