ADVERTISEMENT

ವಿಶೇಷ ಕ್ವಿಜ್ ಗೆದ್ದ ಚಿಣ್ಣರಿಗೆ ಸಿಗಲಿದೆ ಚಂದ್ರಯಾನ–2 ನೋಡುವ ಅವಕಾಶ

ಶಾಲಾ ಮಕ್ಕಳಿಗಾಗಿ ಶೀಘ್ರದಲ್ಲೇ ಕಾರ್ಯಕ್ರಮ l ಆಗಸ್ಟ್‌ 1ಕ್ಕೆ ಸ್ಪರ್ಧೆಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 13:43 IST
Last Updated 28 ಜುಲೈ 2019, 13:43 IST
   

ಬೆಂಗಳೂರು: ಕೇಂದ್ರ ಸರ್ಕಾರವು ಶಾಲಾ ಮಕ್ಕಳಿಗಾಗಿ ದೇಶದಾದ್ಯಂತ ವಿಶೇಷ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಸ್ಪರ್ಧೆಯಲ್ಲಿ ಗೆದ್ದ ಮಕ್ಕಳು ಸೆಪ್ಟೆಂಬರ್‌ನಲ್ಲಿ ಚಂದ್ರನ ಅಂಗಳ ಸ್ಪ‍ರ್ಶಿಸುವ ಚಂದ್ರಯಾನ–2 ನೌಕೆಯ ದೃಶ್ಯವನ್ನು ಇಸ್ರೊದ ಶ್ರೀಹರಿ ಕೋಟದಲ್ಲಿ ನೇರವಾಗಿ ವೀಕ್ಷಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಂಗಳ ಬಾನುಲಿ ಕಾರ್ಯಕ್ರಮ ‘ಮನ್‌ ಕೀ ಬಾತ್‌’ ನಲ್ಲಿ ತಿಳಿಸಿದರು.

ರಸಪ್ರಶ್ನೆ ಕಾರ್ಯಕ್ರಮದ ವಿವರಗಳನ್ನು ಆಗಸ್ಟ್ 1ರಂದು ಪ್ರಕಟಿಸಲಾಗುವುದು, ವಿದ್ಯಾರ್ಥಿಗಳೆಲ್ಲರೂ ಈಗಿನಿಂದಲೇ ಸಿದ್ಧತೆ ನಡೆಸಿ ಭಾಗವಹಿಸಬೇಕು ಎಂದು ಅವರು ಹೇಳಿದರು.

ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗಿರುವ ಆಸಕ್ತಿಯನ್ನು ಈ ಕ್ವಿಜ್‌ ಕಾರ್ಯಕ್ರಮ ಹೆಚ್ಚಿಸಲಿದ್ದು, ಭಾರತದ ಬಾಹ್ಯಾಕಾಶ ಯೋಜನೆಗಳು, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕ್ವಿಜ್‌ನಲ್ಲಿ ಇರುತ್ತವೆ ಎಂದು ಅವರು ಮಾಹಿತಿ ನೀಡಿದರು.

ಬಾಹ್ಯಾಕಾಶ ನೌಕೆ ಎಂದರೇನು, ಅದನ್ನು ಹೇಗೆ ಉಡಾವಣೆ ಮಾಡಲಾಗುತ್ತದೆ, ನೌಕೆಯನ್ನು ಕಕ್ಷೆಗೆ ಸೇರಿಸುವ ಪ್ರಕ್ರಿಯೆ ಹೇಗಿರುತ್ತದೆ, ಉಪಗ್ರಹಗಳು ಎಂದರೇನು, ಅವುಗಳ ಕಾರ್ಯವೈಖರಿ ಏನು ಎಂಬ ಪ್ರಶ್ನೆಗಳನ್ನೇ ಕ್ವಿಜ್‌ನಲ್ಲಿ ಕೇಳಬಹುದು, ಎಂದು ಅವರು ಉದಾಹರಣೆ ಸಹಿತ ವಿವರಿಸಿದರು. ಕ್ವಿಜ್‌ಗೆ ಸಂಬಂಧಿಸಿದ ಮಾಹಿತಿ Mygov ಜಾಲತಾಣದಲ್ಲಿ ಸಿಗಲಿದೆ ಎಂದು ಹೇಳಿದರು.

ಪೋಷಕರು, ಶಿಕ್ಷಕರು ಈ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಸ್ಪರ್ಧೆಗೆ ಸಿದ್ಧಗೊಳಿಸಿ. ಈ ಮೂಲಕ ನಿಮ್ಮ ಶಾಲೆಗೆ ಪ್ರಶಸ್ತಿ ಸಲ್ಲುವಂತೆ ಶ್ರಮಿಸಿ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಶ್ರೀಹರಿಕೋಟಕ್ಕೆ ಭೇಟಿ ನೀಡುವ ಅವಕಾಶ ಸಿಗಲಿದೆ. ಖರ್ಚುಗಳನ್ನು ಸರ್ಕಾರವೇ ಭರಿಸಲಿದೆ ಎಂದರು.

ಚಂದ್ರಯಾನ–2 ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಚಂದ್ರನ ಬಗ್ಗೆ ನಮಗೆ ಗೊತ್ತಿರದ ಹಲವು ಮಾಹಿತಿಗಳನ್ನು ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ: ಚಂದ್ರಯಾನ–2 ಯೋಜನೆಯಿಂದ ನಂಬಿಕೆ ಮತ್ತು ಧೈರ್ಯದ ಬಗ್ಗೆ ಹೊಸ ಪಾಠಗಳನ್ನು ಕಲಿತೆ. ನಾವು ನಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೇಲೆ ಸದಾ ನಂಬಿಕೆಯಿಂದ ಇರಬೇಕು ಎಂದು ಅವರು ಹೇಳಿದರು.

ಈ ಯೋಜನೆಯ ಯಶಸ್ಸಿನಿಂದ ದೇಶದ ಯುವಕರು ವಿಜ್ಞಾನ ಮತ್ತು ತಂತ್ರಜ್ಞಾನದ ಕಡೆಗೆ ಒಲವು ತೋರುವ ಭರವಸೆ ಇದೆ. ವಿಜ್ಞಾನವೇ ಪ್ರಗತಿಯ ಮಾರ್ಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.