ADVERTISEMENT

ಸ್ಥಳೀಯ ಆಟಿಕೆಗಳಿಗೆ ಧ್ವನಿಯಾಗಿ: ಪ್ರಧಾನಿ ಮೋದಿ ಕರೆ

ಪಿಟಿಐ
Published 24 ಜೂನ್ 2021, 9:01 IST
Last Updated 24 ಜೂನ್ 2021, 9:01 IST
ಚನ್ನಪಟ್ಟಣದ ಗೊಂಬೆಗಳು–ಸಾಂದರ್ಭಿಕ ಚಿತ್ರ
ಚನ್ನಪಟ್ಟಣದ ಗೊಂಬೆಗಳು–ಸಾಂದರ್ಭಿಕ ಚಿತ್ರ   

ನವದೆಹಲಿ: ‘ಸ್ಥಳೀಯ ಆಟಿಕೆಗಳಿಗೆ ಧ್ವನಿಯಾಗಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶದ ಜನರಿಗೆ ಕರೆ ನೀಡಿದರು.

‘ಟಾಯ್‌ಕಥಾನ್ -2021’ರಲ್ಲಿ ಭಾಗವಹಿದ್ದವರೊಂದಿಗೆ ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಅವರು,ದೇಶದಲ್ಲಿ ಶೇ 80ರಷ್ಟು ಆಟಿಕೆಗಳು ವಿದೇಶಗಳಿಂದ ಆಮದಾಗುತ್ತಿದ್ದು, ಕೋಟ್ಯಂತರ ರೂಪಾಯಿ ವಿದೇಶಕ್ಕೆ ರವಾನೆಯಾಗುತ್ತಿದೆ. ಈ ಸ್ಥಿತಿ ಬದಲಾಗಬೇಕಾದ ಅಗತ್ಯವಿದೆ ಎಂದರು.

ಸುಮಾರು 100 ಶತಕೋಟಿ ಡಾಲರ್‌ಗಳಷ್ಟಿರುವ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಕೇವಲ 1.5 ಶತಕೋಟಿ ಡಾಲರ್‌ ಎಂದು ಮೋದಿ ಮಾಹಿತಿ ನೀಡಿದರು.

ADVERTISEMENT

ಆಟಿಕೆಗಳ ಮಹತ್ವದ ಕುರಿತು ಮಾತನಾಡಿದ ಪ್ರಧಾನಿ, ‘ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾದರೆ, ಆಟಿಕೆಗಳೇ ಮೊದಲ ಪುಸ್ತಕ ಮತ್ತು ಮೊದಲ ಗೆಳೆಯರು’ ಎಂದು ಬಣ್ಣಿಸಿದರು.

ಪ್ರಧಾನಿ ನರೇಂದ್ರ ಮೋದಿ

‘ನಮ್ಮ ಗಮನವು ಹೊಸ ಆಟಿಕೆಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಇರಬೇಕು. ಭಾರತೀಯತೆಯ ಪ್ರತಿಯೊಂದು ಅಂಶವನ್ನು ಆಸಕ್ತಿದಾಯಕ, ಸಂವಾದಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸುವಂತೆ ಆಟಿಕೆಗಳನ್ನು ಸಿದ್ಧಪಡಿಸಬೇಕು’ ಎಂದು ಅವರು ಆಟಿಕೆಗಳನ್ನು ಸಿದ್ಧಪಡಿಸುವವರ ಕುರಿತು ಹೇಳಿದರು.

‘ಟಾಯ್‌ಕಥಾನ್ -2021’ ಅನ್ನು ಶಿಕ್ಷಣ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಚಿವಾಲಯ, ಜವಳಿ ಸಚಿವಾಲಯ, ವಾರ್ತಾ ಮತ್ತು ಪ್ರಸಾರ ಇಲಾಖೆ ಜಂಟಿಯಾಗಿ ಆಯೋಜಿಸಿವೆ. ಜನಸಮೂಹದ ಮೂಲಕ ನವೀನ ಆಟಿಕೆ ಮತ್ತು ಆಟಗಳ ವಿಚಾರಗಳನ್ನು ತಿಳಿದುಕೊಳ್ಳುವುದು ಇದರ ಹಿಂದಿನ ಉದ್ದೇಶ.

2021ರ ಜನವರಿ 5ರಿಂದ ಆರಂಭವಾಗಿದ್ದ ಟಾಯ್‌ಕಥಾನ್‌ನಲ್ಲಿ ದೇಶದಾದ್ಯಂತ 1.2 ಲಕ್ಷ ಜನರ ಭಾಗವಹಿಸಿದ್ದರು. ಈ ಪೈಕಿ 17,000 ಜನರು ಯೋಜನೆಗಳನ್ನು ಸಲ್ಲಿಸಿದ್ದರು. ಅದರಲ್ಲಿ 1,567 ಜನರ ಯೋಜನೆಗಳು ಅಂತಿಮ ಹಂತಕ್ಕೆ ತಲುಪಿದ್ದವು. ಮೂರು ದಿನಗಳ ಆನ್‌ಲೈನ್ ಟಾಯ್‌ಕಥಾನ್‌ ಜೂನ್‌ 22ರಿಂದ ಆರಂಭವಾಗಿದ್ದು ಜೂನ್‌ 24 (ಗುರುವಾರ) ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.