ADVERTISEMENT

ಮನದ ಮಾತು | ಜಲಮೂಲಗಳ ಸ್ವಚ್ಛತೆಗೆ 100 ದಿನಗಳ ಅಭಿಯಾನ ಮಾಡಿ: ಪ್ರಧಾನಿ ಮೋದಿ ಕರೆ

ಪಿಟಿಐ
Published 28 ಫೆಬ್ರುವರಿ 2021, 7:37 IST
Last Updated 28 ಫೆಬ್ರುವರಿ 2021, 7:37 IST
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ   

ನವದೆಹಲಿ: ‘ಮುಂಗಾರು ಹಂಗಾಮು ಆರಂಭವಾಗುವುದರೊಳಗೆ ನಮ್ಮ ಸುತ್ತಮುತ್ತಲಿನ ಜಲಮೂಲಗಳನ್ನು ಸ್ವಚ್ಛಗೊಳಿಸಿ, ಮಳೆ ನೀರು ಹಿಡಿಯಲು ಅಣಿಗೊಳಿಸಬೇಕುʼಎಂದು ಕರೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ‘ಇದಕ್ಕಾಗಿ ನೂರು ದಿನಗಳ ಸಾರ್ವಜನಿಕ ಅಭಿಯಾನ ನಡೆಸಬಹುದೇʼ ಎಂದು ಜನತೆಯನ್ನು ಕೇಳಿದ್ದಾರೆ.

ತಮ್ಮ ಜನಪ್ರಿಯ ಮಾಸಿಕ ಬಾನುಲಿ ಕಾರ್ಯಕ್ರಮ ‘ಮನದ ಮಾತುʼಕಾರ್ಯಕ್ರಮದಲ್ಲಿ ಪ್ರಮುಖವಾಗಿ ಜಲ ಸಂರಕ್ಷಣೆಯ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ,‘ಜಲಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ಕೇಂದ್ರ ಜಲಶಕ್ತಿ ಸಚಿವಾಲಯ ‘ಕ್ಯಾಚ್‌ ದಿ ರೈನ್‘ (ಮಳೆ ನೀರು ಹಿಡಿಯಿರಿ) ಅಭಿಯಾನ ಆರಂಭಿಸುತ್ತಿದೆ. ‘ಬಿದ್ದ ಜಾಗದಲ್ಲೇ, ಬಿದ್ದ ಸಮಯದಲ್ಲೇ ಮಳೆ ನೀರನ್ನು ಹಿಡಿದು ಸಂಗ್ರಹಿಸಬೇಕು‘ ಎಂಬುದನ್ನು ತಿಳಿಸುವುದು ಅಭಿಯಾನದ ಉದ್ದೇಶವಾಗಿದೆ‘ ಎಂದು ಪ್ರಧಾನಿ ತಿಳಿಸಿದರು.

ಸಮುದಾಯ ಆಧಾರಿತ ಜಲಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಂಗಾರು ಹಂಗಾಮಿಗೆ ಮುನ್ನ ಎಲ್ಲ ಜಲಮೂಲಗಳನ್ನು ಸ್ವಚ್ಛಗೊಳಿಸಿ, ಮಳೆ ನೀರು ಸಂಗ್ರಹಕ್ಕಾಗಿ ಅಣಿಗೊಳಿಸುವುದಕ್ಕಾಗಿ ನೂರು ದಿನಗಳ ಸಾರ್ವಜನಿಕ ಅಭಿಯಾನ ನಡೆಸಬಹುದೇ‘ ಎಂದು ಜನತೆಯನ್ನು ಕೇಳಿದರು.

ADVERTISEMENT

‘ಶತಮಾನಗಳಿಂದ ಮನುಕುಲದ ಅಭಿವೃದ್ಧಿಯಲ್ಲಿ ನೀರಿನ ಪಾತ್ರ ಬಹಳ ನಿರ್ಣಾಯಕವಾಗಿದೆ. ಜಲಸಂರಕ್ಷಣೆಯ ಬಗ್ಗೆ ಸಾಮೂಹಿಕ ಜವಾಬ್ದಾರಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೇ-ಜೂನ್ ವೇಳೆಗೆ ದೇಶದ ಹಲವು ಭಾಗಗಳಲ್ಲಿ ಮುಂಗಾರು ಆರಂಭವಾಗಲಿದೆ. ಅಷ್ಟರೊಳಗೆ ಜಲಮೂಲಗಳ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿರಬೇಕು‘ ಎಂದು ಅವರು ಕರೆ ನೀಡಿದರು.

‘ದೇಶದಾದ್ಯಂತ ವಿಜ್ಞಾನವನ್ನು ಹೆಚ್ಚು ಜನಪ್ರಿಯಗೊಳಿಸುವ ಅವಶ್ಯಕತೆಯಿದೆ‘ ಎಂದು ಹೇಳಿದ ಅವರು, ‘ವಿಜ್ಞಾನವನ್ನು ಭೌತಶಾಸ್ತ್ರ-ರಸಾಯನಶಾಸ್ತ್ರ ಮತ್ತು ಪ್ರಯೋಗಾಲಯಗಳಿಗೆ ಸೀಮಿತಗೊಳಿಸಬಾರದು‘ ಎಂದು ಪ್ರತಿಪಾದಿಸಿದರು. 'ಲ್ಯಾಬ್ ಟು ಲ್ಯಾಂಡ್' ಎಂಬ ಮಂತ್ರದೊಂದಿಗೆ ವಿಜ್ಞಾನವನ್ನು ವಿಸ್ತರಿಸಬೇಕು ಎಂದು ಮೋದಿ ಕರೆ ನೀಡಿದರು.

‘ಸ್ಥಳೀಯ ಉತ್ಪನ್ನಗಳ ಬಗ್ಗೆ ಜನರು ಹೆಮ್ಮೆಪಡುವಾಗ ಆತ್ಮನಿರ್ಭರ ಭಾರತ್ ಕೇವಲ ಆರ್ಥಿಕ ಕಾರ್ಯಕ್ರಮವಾಗಿ ಅಷ್ಟೇ ಉಳಿದೇ, ರಾಷ್ಟ್ರೀಯ ಮನೋಭಾವವಾಗಿಯೂ ಬದಲಾಗುತ್ತದೆ‘ ಎಂದು ಪ್ರಧಾನಿ ಹೇಳಿದರು.

ಮನದ ಮಾತು ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭಾಷೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ‘ವಿಶ್ವದ ಅತ್ಯಂತ ಹಳೆಯ ಭಾಷೆ ತಮಿಳು. ತಮಿಳಿನ ಸಾಹಿತ್ಯ ಸುಂದರವಾಗಿದೆ. ಈ ಭಾಷೆ ಕಲಿಯಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂಬ ಕೊರಗಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.