ADVERTISEMENT

ಇದು ಭಾರತೀಯ ಶತಮಾನ; 2047ರಲ್ಲಿ ವಿಕಸಿತ ಭಾರತ: ನರೇಂದ್ರ ಮೋದಿ

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ₹13,430 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ

ಪಿಟಿಐ
Published 16 ಅಕ್ಟೋಬರ್ 2025, 12:54 IST
Last Updated 16 ಅಕ್ಟೋಬರ್ 2025, 12:54 IST
   

ಕರ್ನೂಲ್‌/ಆಂಧ್ರಪ್ರದೇಶ: ’ಇಪ್ಪತ್ತೊಂದನೆಯ ಶತಮಾನವು 140 ಕೋಟಿ ಭಾರತೀಯರದ್ದಾಗಿದೆ. 2047ರ ವೇಳೆಗೆ ದೇಶವು ‘ವಿಕಸಿತ ಭಾರತ’ವಾಗಿ ಬೆಳಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

ಉದ್ಯಮ, ಇಂಧನ, ರಸ್ತೆ, ರೈಲ್ವೆ, ರಕ್ಷಣಾ ವಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಕರ್ನೂಲ್‌ ಜಿಲ್ಲೆಯಲ್ಲಿ ಗುರುವಾರ ಆಂಧ್ರಪ್ರದೇಶ ಸರ್ಕಾರದಿಂದ ಹಮ್ಮಿಕೊಳ್ಳಲಾದ ₹13,430 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

‘ಮೇಕ್‌ ಇನ್‌ ಇಂಡಿಯಾ’ದ ಮೂಲಕ ಸ್ವದೇಶಿ ಶಕ್ತಿಯನ್ನು ನಾವು ಈಗಾಗಲೇ ನೋಡಿದ್ದೇವೆ. ಪಹಲ್ಗಾಮ್‌ ದಾಳಿಯ ನಂತರ ನಡೆದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯೇ ಇದಕ್ಕೆ ಉತ್ತಮ ಉದಾಹರಣೆ. 21ನೇ ಶತಮಾನವು ಭಾರತದ್ದಾಗಿದೆ. 2047ರಲ್ಲಿ ನಾವು ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸಲಿದ್ದೇವೆ. ಆ ವೇಳಗೆ ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ’ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. 

ADVERTISEMENT

‘ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರ ದೂರದೃಷ್ಟಿಯ ನಾಯಕತ್ವವನ್ನು ಆಂಧ್ರಪ್ರದೇಶ ಹೊಂದಿದೆ. ಗೂಗಲ್‌ ಕಂಪನಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ದತ್ತಾಂಶ ಕೇಂದ್ರ ಹಾಗೂ ಕೃತಕ ಬುದ್ಧಿಮತ್ತೆ (ಎ.ಐ) ಮೂಲಸೌಕರ್ಯ ಹಬ್ ನಿರ್ಮಿಸಲಿದೆ. ಕೇಂದ್ರ ಸರ್ಕಾರವು ಆಂಧ್ರಪ್ರದೇಶಕ್ಕೆ ಸಂಪೂರ್ಣ ಸಹಕಾರ ನೀಡಲಿದೆ’ ಎಂದರು.

ವಿವಿಧ ಕಾಮಗಾರಿಗಳಿಗೆ ಚಾಲನೆ: ಕರ್ನೂಲ್‌ನ ಓರ್ವಕಲ್‌ ಮತ್ತು ಕೊಪ್ಪರ್ತಿ ಕೈಗಾರಿಕಾ ಪ್ರದೇಶಗಳಲ್ಲಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಮತ್ತು ಜಾರಿ ಟ್ರಸ್ಟ್‌ (ಎನ್‌ಐಸಿಡಿಐಟಿ) ಮತ್ತು ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮದ ಸಹಯೋಗದಲ್ಲಿ ಬಹು ವಲಯ ಕೈಗಾರಿಕಾ ಕೇಂದ್ರದ ನಿರ್ಮಾಣಕ್ಕೆ ₹4,920 ಕೋಟಿ ಮೊತ್ತದ ಕಾಮಗಾರಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. 

ಈ ಕೈಗಾರಿಕಾ ಕೇಂದ್ರವು ₹21 ಸಾವಿರ ಕೋಟಿಯಷ್ಟು ಹೂಡಿಕೆ ಆಕರ್ಷಿಸಲಿದ್ದು, 1 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ರಾಯಲಸೀಮೆ ಸೇರಿದಂತೆ ಆಂಧ್ರದ ದಕ್ಷಿಣ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಬಲ್ಲ ಕೈಗಾರಿಕಾ ವಲಯ ಅಭಿವೃದ್ಧಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ವಿದ್ಯುತ್‌ ಸ್ಪರ್ಶ: ಬಾಲಕ ಸಾವು 

ಕರ್ನೂಲ್‌ ಜಿಲ್ಲೆಯಲ್ಲಿ ಗುರುವಾರ ಪ್ರಧಾನಿ ಮೋದಿ ಅವರ ಸಾರ್ವಜನಿಕ ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳದ ಸಮೀಪ ವಾಹನ ನಿಲುಗಡೆ ಪ್ರದೇಶದಲ್ಲಿ 15 ವರ್ಷದ ಬಾಲಕನೊಬ್ಬ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದಾನೆ.  ಪ್ರಧಾನಿ ಅವರ ಕಾರ್ಯಕ್ರಮಕ್ಕಾಗಿ ಧ್ವಜಸ್ತಂಭಗಳನ್ನು ನಿರ್ಮಿಸಲು ಬಾಲಕ ಕಬ್ಬಿಣದ ಪೈಪ್‌ ಹೊತ್ತುಕೊಂಡು ಬರುತ್ತಿದ್ದ ವೇಳೆ ಪೈಪ್‌ ಹೈಟೆನ್ಷನ್‌ ವಿದ್ಯುತ್‌ ತಂತಿಗೆ ತಗುಲಿ ಅವಘಡ ಸಂಭವಿಸಿದೆ. ಮೃತ ಬಾಲಕನನ್ನು ಕರ್ನೂಲ್‌ ಜಿಲ್ಲೆಯ ಮುನಗಲುಪಡು ನಿವಾಸಿ ಎಂದು ಗುರುತಿಸಲಾಗಿದೆ ಎಂದು ಕರ್ನೂಲ್‌ ಡಿಎಸ್‌ಪಿ ಬಾಬು ಪ್ರಸಾದ್‌ ತಿಳಿಸಿದ್ದಾರೆ.

‘ಜತೆಯಾಗಿ  ಹೆಜ್ಜೆ ಇರಿಸಲಿವೆ’

‘ಆಂಧ್ರಪ್ರದೇಶವು ಆತ್ಮನಿರ್ಭರ ಭಾರತದ ಮಹತ್ವದ ಕೊಡುಗೆದಾರ ರಾಜ್ಯವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಆ ಮೂಲಕ ರಾಜ್ಯದ ಪ್ರಗತಿಯ ಜತೆಗೆ ರಾಷ್ಟ್ರದ ಪ್ರಗತಿಯನ್ನೂ ಪ್ರೇರೇಪಿಸುತ್ತಿದೆ. ದೆಹಲಿ ಮತ್ತು ಅಮರಾವತಿ ಪ್ರಗತಿ ಪಥದಲ್ಲಿ ಜತೆಯಾಗಿ ಹೆಜ್ಜೆ ಇರಿಸಲಿವೆ’ ಎಂದು ಪ್ರಧಾನಿ ಹೇಳಿದರು.  ‘ಹಿಂದಿನ ಸರ್ಕಾರವು ಆಂಧ್ರಪ್ರದೇಶದ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದರಿಂದ ಇಡೀ ದೇಶದ ಪ್ರಗತಿಗೆ ಹಿನ್ನಡೆ ಆಗಿತ್ತು. ಈಗ ಕಳೆದ 16 ತಿಂಗಳಿಂದ ಆಂಧ್ರಪ್ರದೇಶವು ತಯಾರಿಕಾ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಂಧ್ರಪ್ರದೇಶವು ಸ್ವಾಭಿಮಾನ ಮತ್ತು ಸಂಸ್ಕೃತಿಯ ನಾಡು ಮಾತ್ರವಲ್ಲ ವಿಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವೂ ಆಗಿದೆ. ಇಲ್ಲಿನ ಡಬಲ್‌ ಎಂಜಿನ್‌ ಸರ್ಕಾರದಲ್ಲಿ ಅಭೂತಪೂರ್ವ ಪ್ರಗತಿ ಕಾಣುತ್ತಿದ್ದೇವೆ.
-ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.