ADVERTISEMENT

ಹಾಟ್‌ಸ್ಪಾಟ್‌ನಲ್ಲಿ ಕಠಿಣ ನಿರ್ಬಂಧ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 20:25 IST
Last Updated 27 ಏಪ್ರಿಲ್ 2020, 20:25 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ:ಲಾಕ್‌ಡೌನ್‌ 3.0 ಯತ್ತ ದೇಶವು ಸಾಗುವುದು ನಿಚ್ಚಳವಾಗಿದೆ. 40 ದಿನಗಳ ದಿಗ್ಬಂಧನವು ಮೇ 3ಕ್ಕೆ ಕೊನೆಗೊಳ್ಳಲಿದೆ. ಆದರೆ, ಕೋವಿಡ್‌ ಹಾಟ್‌ಸ್ಪಾಟ್‌ಗಳಲ್ಲಿ ಕಟ್ಟುನಿಟ್ಟಿನ ದಿಗ್ಬಂಧನ ಮತ್ತು ಹಸಿರು ವಲಯದಲ್ಲಿ ಹೆಚ್ಚು ವಿನಾಯಿತಿ ಮೂರನೇ ಲಾಕ್‌ಡೌನ್‌ನ ಆದ್ಯತೆಯಾಗಲಿವೆ.

ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ವಿಡಿಯೊ ಸಂವಾದದಲ್ಲಿ ಲಾಕ್‌ಡೌನ್‌ ಸಡಿಲಿಕೆ ಬಗ್ಗೆ ಚರ್ಚೆಯಾಗಿದೆ. ಸಂವಾದದಲ್ಲಿ ಭಾಗಿಯಾದ ನಾಲ್ವರು ಮುಖ್ಯಮಂತ್ರಿಗಳು ದಿಗ್ಬಂಧನ ತೆರವಿಗೆ ಒಲವು ತೋರಿದ್ದಾರೆ. ಲಾಕ್‌ಡೌನ್‌ಗೆ ಸಂಬಂಧಿಸಿ ಮೋದಿ ಅವರು ಶನಿವಾರ ಅಥವಾ ಭಾನುವಾರ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಕೊರೊನಾ ವಿರುದ್ಧದ ಹೋರಾಟದ ಜತೆಗೆ ಅರ್ಥ ವ್ಯವಸ್ಥೆಯೂ ಮುಖ್ಯ ಎಂದು ಪ್ರಧಾನಿ ಹೇಳಿದ್ದಾರೆ. ಕೋವಿಡ್‌ ಹಾಟ್‌ಸ್ಪಾಟ್‌ ಅಲ್ಲದ ಪ್ರದೇಶಗಳಲ್ಲಿ ವಿನಾಯಿತಿಗಳು ಇನ್ನಷ್ಟು ಹೆಚ್ಚಲಿವೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ದಿಗ್ಬಂಧನದಿಂದಾಗಿ ಅರ್ಥ ವ್ಯವಸ್ಥೆ ಕುಸಿದಿದೆ. ವಲಸೆ ಕಾರ್ಮಿಕರು ಕಂಗೆಟ್ಟಿದ್ದಾರೆ. ಹಾಗಾಗಿ, ಆರ್ಥಿಕ ಚಟುವಟಿಕೆ ಆರಂಭಕ್ಕೆ ಅವಕಾಶ ನೀಡಬೇಕು ಎಂದು ಹಲವು ರಾಜ್ಯಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ವಿಡಿಯೊ ಸಂವಾದ ನಡೆಸಲಾಗಿತ್ತು.

ADVERTISEMENT

**
ಕೇಂದ್ರದ ದ್ವಂದ್ವ: ಮಮತಾ
‘ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಎಲ್ಲ ಅಂಗಡಿಗಳು ತೆರೆಯಲು ಅವಕಾಶ ಕೊಡಬೇಕು ಎಂದೂ ಕೇಂದ್ರ ಹೇಳುತ್ತಿದೆ. ಅಂಗಡಿಗಳು ತೆರೆದಿದ್ದರೆ ಜನರು ಅಂಗಡಿಗಳಿಗೆ ಹೋಗುತ್ತಾರೆ. ಹಾಗಾದರೆ, ಬೀದಿಗಳಲ್ಲಿ ಜನ ದಟ್ಟಣೆ ಉಂಟಾಗುತ್ತದೆ. ಲಾಕ್‌ಡೌನ್‌ನ ಉದ್ದೇಶವೇ ವಿಫಲವಾಗುತ್ತದೆ’ ಎಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

**
ಆರ್ಥಿಕ ಪ್ಯಾಕೇಜ್‌ ಬೇಡಿಕೆಗೆ ಮೌನ
ಕೇಂದ್ರದಿಂದ ರಾಜ್ಯಗಳಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿಗಳು ಪ್ರಧಾನಿಯನ್ನು ಕೋರಿದ್ದಾರೆ. ರಾಜ್ಯಗಳಿಗೆ ಈಗ ವರಮಾನ ಇಲ್ಲದಿರುವುದರಿಂದ ನಿತ್ಯದ ಖರ್ಚು ತೂಗಿಸುವುದೇ ಕಷ್ಟವಾಗಿದೆ. ಆದರೆ, ಈ ಬೇಡಿಕೆಗೆ ಮೋದಿಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ, ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯಗಳ ಸಾಧನೆಗೆ ಮೆಚ್ಚುಗೆ ಸೂಚಿಸಿದರು ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.