ಪ್ರಧಾನಿ ಮೋದಿ
-ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರದಿಂದ ನಾಲ್ಕು ದಿನ ಬ್ರಿಟನ್ ಹಾಗೂ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ.
ವ್ಯಾಪಾರ, ಹೂಡಿಕೆ ಮತ್ತು ರಕ್ಷಣಾ ವಿಷಯಗಳ ಕುರಿತು ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಈ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ತಿಳಿಸಿದೆ.
ಬುಧವಾರ ಪ್ರವಾಸ ಆರಂಭಿಸಲಿರುವ ಮೋದಿ, ಮೊದಲು ಲಂಡನ್‌ಗೆ ತೆರಳಲಿದ್ದು, ಅಲ್ಲಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವುದರ ಜೊತೆಗೆ, ಭಾರತ– ಬ್ರಿಟನ್ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಲಿದ್ದಾರೆ. ವ್ಯಾಪಾರ, ಆರ್ಥಿಕತೆ, ತಂತ್ರಜ್ಞಾನ, ಸಂಶೋಧನೆ, ಭದ್ರತೆ, ಹವಾಮಾನ, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಬ್ರಿಟನ್‌ಗೆ ಮೋದಿಯವರ ನಾಲ್ಕನೇ ಭೇಟಿ ಇದಾಗಲಿದೆ. ಈ ವೇಳೆ ಅವರು ಕಿಂಗ್ ಚಾರ್ಲ್ಸ್ –3 ಅವರನ್ನೂ ಭೇಟಿಯಾಗುವ ನಿರೀಕ್ಷೆ ಇದೆ.
ಜು.26ರಂದು ಮೋದಿ ಲಂಡನ್‌ನಿಂದ ಮಾಲ್ಡೀವ್ಸ್‌ಗೆ ತೆರಳಲಿರುವ ಮೋದಿ, ಆ ದೇಶದ 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಮಾಲ್ಡೀವ್ಸ್‌ಗೆ ಮೋದಿಯವರ ಮೂರನೇ ಭೇಟಿ ಇದಾಗಿದ್ದು, ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಮೋದಿ ಅವರಿಗೆ ಆಹ್ವಾನ ನೀಡಿದ್ದರು.
ಸಮಗ್ರ ಆರ್ಥಿಕತೆ ಹಾಗೂ ಕಡಲ ಭದ್ರತಾ ಪಾಲುದಾರಿಕೆಯಲ್ಲಿ ಉಭಯ ದೇಶಗಳ ದೃಷ್ಟಿಕೋನದ ಕುರಿತು ಮೋದಿ ಹಾಗೂ ಮುಯಿಜು ಮಾತುಕತೆ ನಡೆಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.