ADVERTISEMENT

ಪ್ರಧಾನಿಯ ವರ್ಚಸ್ಸು ಸತ್ತಿದೆ, 3ನೇ ಮಾರಣಾಂತಿಕ ಕೋವಿಡ್‌ ಅಲೆ ಬರುತ್ತಿದೆ: ರಾಹುಲ್

​ಪ್ರಜಾವಾಣಿ ವಾರ್ತೆ
Published 28 ಮೇ 2021, 12:59 IST
Last Updated 28 ಮೇ 2021, 12:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ನಾಯಕ ಎಂಬ ವರ್ಚಸ್ಸು ಸತ್ತಿದೆ ಎಂದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮುಂಬರುವ ಕೋವಿಡ್‌ 19ರ 3ನೇ ಅಲೆ ಬಗ್ಗೆ ಭಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವರ್ಚುವಲ್‌ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್‌ ಗಾಂಧಿ, ಅತ್ಯಂತ ವೇಗವಾಗಿ ಹರಡುತ್ತಿರುವ ಕೋವಿಡ್‌ ಸೋಂಕಿನ ವಿರುದ್ಧ ಲಸಿಕೆ ಕಾರ್ಯಕ್ರಮವನ್ನು ಮೋದಿ ಸರ್ಕಾರ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸದಿದ್ದರೆ ಕೋವಿಡ್‌-19ರ 3ನೇ ಅಲೆ ಹೆಚ್ಚು ಮಾರಣಾಂತಿಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಪ್ರಧಾನಿ ಮೋದಿ ಕಳೆದು ಹೋಗುತ್ತಿರುವ ತನ್ನ ವರ್ಚಸ್ಸಿನ ಬಗ್ಗೆ ಹೆಚ್ಚು ಆತಂಕ ಪಡುತ್ತಿದ್ದಾರೆ. ಮೋದಿ ಆಘಾತಕ್ಕೆ ಒಳಗಾಗಿದ್ದಾರೆ. ಭೀತಿ ಹೊಂದಿದ್ದಾರೆ. ತನ್ನ ವರ್ಚಸ್ಸನ್ನು ಸರಿಪಡಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತಿದ್ದಾರೆ. ತನ್ನ ಮುಂದಿರುವ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ADVERTISEMENT

ಕೋವಿಡ್‌ 3ನೇ ಅಲೆ 2ನೇ ಅಲೆಗಿಂತ ಹೆಚ್ಚು ಅಪಾಯಕಾರಿಯಾಗಿರಲಿದೆ. ಶೇ.3ರಷ್ಟು ಲಸಿಕೆ ನೀಡಲಾಗಿದೆ. ಲಸಿಕೆ ಕಾರ್ಯಕ್ರಮವನ್ನು ಅತ್ಯಂತ ತುರ್ತಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸದಿದ್ದರೆ 4ನೇ ಮತ್ತು 5ನೇ ಅಲೆ ಬಂದಾಗ ಲಸಿಕೆ ಕೆಲಸವನ್ನೇ ಮಾಡದಂತಹ ಸ್ಥಿತಿಗೆ ತಲುಪುತ್ತೇವೆ ಎಂದು ರಾಹುಲ್‌ ಗಾಂಧಿ ಆತಂಕ ವ್ಯಕ್ತ ಪಡಿಸಿದ್ದಾರೆ.

ಜನಸಂಖ್ಯೆಗೆ ಅನುಗುಣವಾಗಿ ಅಮೆರಿಕದಲ್ಲಿ ಶೇ.50, ಬ್ರೆಜಿಲ್‌ನಲ್ಲಿ ಶೇ.9ರಷ್ಟು ಲಸಿಕೆ ನೀಡಲಾಗಿದೆ. ಆದರೆ ಭಾರತದಲ್ಲಿ ಕೇವಲ ಶೇ.3ರಷ್ಟು ಮಂದಿಗೆ ಮಾತ್ರ ಲಸಿಕೆ ಸಿಕ್ಕಿದೆ. ಉಳಿದ ಶೇ.97ರಷ್ಟು ಮಂದಿ ಸೋಂಕಿನ ಭಯದಲ್ಲೇ ಬದುಕುವಂತಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಪ್ರಧಾನಿ ಮೋದಿ ರೋಗ ತಡೆಗಟ್ಟುವ ಉಪಾಯದ ಬಗ್ಗೆ ಯೋಚಿಸುವುದಿಲ್ಲ. ಅವರೊಬ್ಬರು ಇವೆಂಟ್‌ ಮ್ಯಾನೇಜರ್‌. ಏಕಕಾಲಕ್ಕೆ ಒಂದು ಇವೆಂಟ್‌ ಬಗ್ಗೆ ಚಿಂತಿಸುತ್ತಾರೆ. ಈಗ ಇವೆಂಟ್‌ಗಳು ಬೇಕಿಲ್ಲ. ಇದರಿಂದ ಜನರು ಸಾಯುತ್ತಿದ್ದಾರೆ. ಉಪಾಯ ಹೂಡಬೇಕಿದೆ. ಅತ್ಯಂತ ಪರಿಣಾಮಕಾರಿ ಉಪಾಯವೆಂದರೆ ಕೊರೊನಾ ಹರಡುವ ಪ್ರಕ್ರಿಯೆಗೆ ತಡೆಯೊಡ್ಡಬೇಕು ಎಂದು ರಾಹುಲ್‌ ಸಲಹೆ ನೀಡಿದರು.

ಪ್ರಮುಖವಾಗಿ ಜನರಿಗೆ ಸಹಾಯ ಮಾಡಲು ಮುಂದಾಗುತ್ತಿರುವವರ ಮಾತುಗಳನ್ನು ಕೇಳಬೇಕು. ವಿಪಕ್ಷ ನಾಯಕರೇ ಇರಲಿ, ಪ್ರಮುಖ ವ್ಯಕ್ತಿಗಳೇ ಇರಲಿ. ಭಾಗೆಲ್‌ ಜೀ, ನರೇಂದ್ರ ಮೋದಿಜೀ, ಮಮತಾ ಬ್ಯಾನರ್ಜೀ ಎಲ್ಲರೂ ಒಂದೇ ಪುಟದಲ್ಲಿದ್ದಾರೆ. ನಮಗೆ ವೈರಸ್‌ ತಡೆಯೊಡ್ಡುವ ಸಾಮರ್ಥ್ಯವಿದೆ ಎಂದು ಹೇಳುತ್ತ ಛತ್ತೀಸ್‌ಗಡ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳನ್ನು ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.