ADVERTISEMENT

ರೈತರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚು ಆಯ್ಕೆಗಳು ಬೇಕಿವೆ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 1 ಮಾರ್ಚ್ 2021, 18:34 IST
Last Updated 1 ಮಾರ್ಚ್ 2021, 18:34 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ‘ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳ ಅಗತ್ಯವಿದೆ. ಇದು ಇಂದಿನ ತುರ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಜೆಟ್‌ನಲ್ಲಿ ಕೃಷಿ ಸಚಿವಾಲಯಕ್ಕೆ ನೀಡಿರುವ ಅನುದಾನಗಳ ಬಗ್ಗೆ ವೆಬಿನಾರ್‌ನಲ್ಲಿ ವಿವರ ನೀಡುವಾಗ ಪ್ರಧಾನಿ ಈ ಮಾತು ಹೇಳಿದ್ದಾರೆ. ‘ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚು ಆಯ್ಕೆಗಳನ್ನು ಸೃಷ್ಟಿಸಲು ಖಾಸಗಿ ವಲಯದ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ. ಸರ್ಕಾರಿ, ಖಾಸಗಿ ಮತ್ತು ಸೊಸೈಟಿ ಮಾದರಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಆಯ್ಕೆಗಳನ್ನು ನೀಡಬಹುದು’ ಎಂದು ಅವರು ವಿವರಿಸಿದ್ದಾರೆ.

‘ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದರಿಂದ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಇದರಿಂದ ರೈತರ ಆದಾಯ ಹೆಚ್ಚಲಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಸಾಕಷ್ಟು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿವೆ. ಇದರಲ್ಲೂ ಖಾಸಗಿ ವಲಯದ ಭಾಗವಹಿಸುವಿಕೆ ಅತ್ಯಗತ್ಯ’ ಎಂದು ಮೋದಿ ಹೇಳಿದ್ದಾರೆ.

ADVERTISEMENT

ಬೇಳೆಕಾಳುಗಳು, ತರಕಾರಿಗಳು, ಹಣ್ಣುಗಳು ಮತ್ತು ಮೀನುಗಳನ್ನು ಸಂಸ್ಕರಿಸುವ ವ್ಯವಸ್ಥೆಯ ಅಗತ್ಯವಿದೆ. ರೈತರಿಗೆ ಅವರ ಹಳ್ಳಿಗಳ ಸಮೀಪವೇ ಈ ಸವಲತ್ತು ದೊರೆಯುವಂತೆ ಆಗಬೇಕು. ಈ ಮೂಲಕ ಈ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು. ಇದರಿಂದ ಗ್ರಾಮೀಣ ಪ್ರದೇಶದ ಯುವಕರಿಗೆ ಹಳ್ಳಿಗಳಲ್ಲೇ ಉದ್ಯೋಗ ದೊರೆಯುತ್ತದೆ. ಈ ಕೆಲಸಗಳು 30-40 ವರ್ಷಗಳ ಹಿಂದೆಯೇ ಆಗಿದ್ದರೆ, ಇಂದು ಇಂತಹ ಸ್ಥಿತಿ ಇರುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು ನಗರಗಳನ್ನು ತಲುಪುವಂತಾಗಬೇಕು. ಒಂದು ಜಿಲ್ಲೆಯಿಂದ ಒಂದು ಮೌಲ್ಯವರ್ಧಿತ ಉತ್ಪನ್ನ ಬರುವಂತಾಗಬೇಕು. ಆ ಮೂಲಕ ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆ ಪ್ರವೇಶಿಸಬಹುದು. ಇದಕ್ಕಾಗಿ ಯೋಜನೆ ರೂಪಿಸಲಾಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.