ADVERTISEMENT

ಒಂದು ದೇಶ-ಒಂದು ಸಮವಸ್ತ್ರ; ಎಲ್ಲ ರಾಜ್ಯಗಳ ಪೊಲೀಸರಿಗೆ ಒಂದೇ ದಿರಿಸಿಗೆ ಮೋದಿ ಸಲಹೆ

ಎಲ್ಲ ರಾಜ್ಯಗಳ ಪೊಲೀಸರಿಗೆ ಒಂದೇ ದಿರಿಸಿಗೆ ಮೋದಿ ಸಲಹೆ

ಪಿಟಿಐ
Published 28 ಅಕ್ಟೋಬರ್ 2022, 21:30 IST
Last Updated 28 ಅಕ್ಟೋಬರ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೂರಜ್‌ಕುಂಡ್‌ (ಹರಿಯಾಣ):ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ರೂಪಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಒಂದೇ ಸಮವಸ್ತ್ರ ಇದ್ದರೆ, ಎಲ್ಲಾ ರಾಜ್ಯದ ಪೊಲೀಸರಿಗೆ ಏಕರೂಪದ ಗುರುತು ದೊರೆಯುತ್ತದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ.

ಇಲ್ಲಿ ನಡೆದ ಎರಡು ದಿನಗಳ ಚಿಂತನ ಶಿಬಿರದಲ್ಲಿ ಅವರು ಈ ಮಾತು ಹೇಳಿದ್ದಾರೆ.ಶಿಬಿರದಲ್ಲಿ ರಾಜ್ಯಗಳ ಗೃಹ ಸಚಿವರ ಜತೆಗಿನ ಸಂವಾದದ ವೇಳೆ ಮೋದಿ ಅವರು ಈ ಪ್ರಸ್ತಾವ ಇರಿಸಿದ್ದಾರೆ.

‘ದೇಶದಾದ್ಯಂತ ಪೊಲೀಸರಿಗೆ ಒಂದೇ ಸ್ವರೂಪದ ಸಮವಸ್ತ್ರ ಇದ್ದರೆ, ಅವರನ್ನು ಗುರುತಿಸಲು ಜನರಿಗೆ ಅನುಕೂಲವಾಗು
ತ್ತದೆ. ಜತೆಗೆ ಎಲ್ಲಾ ಪೊಲೀಸರಿಗೆ ಒಂದೇ ಗುಣಮಟ್ಟದ ಸಮವಸ್ತ್ರ ದೊರೆಯುತ್ತದೆ. ಇದನ್ನು ನಾನು ಹೇರುತ್ತಿಲ್ಲ. ಸಲಹೆ ನೀಡುತ್ತಿದ್ದೇನೆ ಅಷ್ಟೆ. ಇದು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಲು ಐದು ಅಥವಾ ಐವತ್ತು ಅಥವಾ ನೂರು ವರ್ಷಗಳಾಗಬಹುದು. ಆದರೆ, ಆ ದಿಕ್ಕಿನಲ್ಲಿ ನಾವು ಯೋಚಿಸುವುದನ್ನು ಆರಂಭಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವು ಹಲವು ಯೋಜನೆ ಹಾಗೂ ಸವಲತ್ತುಗಳನ್ನು ದೇಶದಾದ್ಯಂತ ಏಕರೂಪಗೊಳಿಸುವ ಕ್ರಮ ತೆಗೆದುಕೊಂಡಿದೆ.‘ಒಂದು ದೇಶ, ಒಂದು ಮೊಬಿಲಿಟಿ’, ‘ಒಂದು ದೇಶ, ಒಂದು ಗ್ರಿಡ್‌’, ‘ಒಂದು ದೇಶ, ಒಂದು ಪಡಿತರ ಚೀಟಿ’ ಅಂತಹ ಯೋಜನೆಗಳಲ್ಲಿ ಪ್ರಮುಖವಾದವುಗಳು.

ದೇಶದಾದ್ಯಂತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ‘ಒಂದು ದೇಶ, ಒಂದು ಚುನಾವಣೆ’ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಬಿಜೆಪಿಯ ಹಲವು ನಾಯಕರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಪದ್ಧತಿ ಅಳವಡಿಕೆಗೆ ಸಿದ್ಧವಿರುವುದಾಗಿ ಚುನಾವಣಾ ಆಯೋಗವೂ ಹೇಳಿತ್ತು.

‘ಪೆನ್ನು ಹಿಡಿದ ನಕ್ಸಲರು’

ಪೆನ್ನು ಹಿಡಿದ ನಕ್ಸಲರು ದೇಶದ ಹೊಸ ತಲೆಮಾರಿನ ಜನರ ತಲೆಯನ್ನು ಕೆಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಇಂತಹವರಿಗೆ ವಿದೇಶಗಳಿಂದ ನೆರವು ಬರುತ್ತಿದೆ.ಇಂತಹ ಕೆಲಸದಲ್ಲಿ ತೊಡಗಿದವರು ಬಂದೂಕು ಹಿಡಿದ ನಕ್ಸಲರಾಗಿರಲಿ ಅಥವಾ ಪೆನ್ನು ಹಿಡಿದ ನಕ್ಸಲರಾಗಿರಲಿ, ಅವರನ್ನು ನಾವು ತಡೆಯುತ್ತೇವೆ’ ಎಂದು ಮೋದಿ ಹೇಳಿದ್ದಾರೆ.

ಇಂದು ಅಪರಾಧ ಎಂಬುದು ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿಲ್ಲ. ಅದು ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಣೆಯಾಗಿದೆ. ಅದನ್ನು ತಡೆಗಟ್ಟಲು ರಾಜ್ಯಗಳ ನಡುವೆ ಸಹಕಾರವಿರಬೇಕು. ಅಪರಾಧಗಳನ್ನು ತಡೆದರೆ ಮಾತ್ರ ರಾಜ್ಯಗಳ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದ್ದಾರೆ.

ಸುಳ್ಳು ಸುದ್ದಿ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಒಂದು ಸಣ್ಣ ಸುಳ್ಳು ಸುದ್ದಿಯೂ ದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ಬೇರೆಯವರಿಗೆ ಕಳುಹಿಸುವ ಮುನ್ನ, ಅದು ಸತ್ಯವೇ ಅಥವಾ ಸುಳ್ಳೇ ಎಂಬುದನ್ನು ಪರಿಶೀಲಿಸುವುದನ್ನು ಕಲಿತುಕೊಳ್ಳುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.

****

ಅಪರಾಧ ಕೃತ್ಯಗಳ ತನಿಖೆಯಲ್ಲಿ ಆಧುನಿಕ ತಂತ್ರಜ್ಞಾನಗಳು ಮಹತ್ವದ ಪಾತ್ರವಹಿಸುತ್ತವೆ. ಹೀಗಾಗಿ ತಂತ್ರಜ್ಞಾನ ಅಳವಡಿಕೆಗೆ ರಾಜ್ಯ ಸರ್ಕಾರಗಳು ಹಣ ಇಲ್ಲ ಎನ್ನಬಾರದು.

-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.