ADVERTISEMENT

ರಾಯ್‌ಬರೇಲಿಗೆ 16ರಂದು ಪ್ರಧಾನಿ ಭೇಟಿ

ಪಿಟಿಐ
Published 15 ಡಿಸೆಂಬರ್ 2018, 11:53 IST
Last Updated 15 ಡಿಸೆಂಬರ್ 2018, 11:53 IST

ಲಖನೌ: ಗಾಂಧಿ ಕುಟುಂಬದ ಸಾಂಪ್ರದಾಯಕ ಕ್ಷೇತ್ರ ಎನಿಸಿರುವ ರಾಯ್‌ಬರೇಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಭೇಟಿ ನೀಡುತ್ತಿದ್ದಾರೆ. ಇದು ರಾಯ್‌ಬರೇಲಿಗೆ ಅವರ ಮೊದಲ ಭೇಟಿ.

ಮುಂದಿನ ವರ್ಷ ಕುಂಭೇಮೇಳ ನಡೆಯಲಿರುವ ಅಲಹಾಬಾದ್‌ಗೂ ಅವರು ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಹಮ್‌ಸಫರ್ ಪೆಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿರುವ ಪ್ರಧಾನಿ, ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿ ಮಾಧ್ಯಮ ಸಹಸಂಚಾಲಕ ನವೀನ್ ಶ್ರೀವಾಸ್ತವ ತಿಳಿಸಿದ್ದಾರೆ.

ಇದೇ ವೇಳೆ ₹1,100 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ADVERTISEMENT

ಚುನಾವಣಾ ರಣತಂತ್ರ?

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಏಟು ನೀಡಲು ಸೋನಿಯಾಗಾಂಧಿ ಅವರ ತವರು ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಪ್ರಧಾನಿ ರಣತಂತ್ರ ಹೆಣೆಯುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕಕ್ಕೂ ಮುನ್ನವೇ ಮೋದಿ ಅವರ ರಾಯ್‌ಬರೇಲಿ ಪ್ರವಾಸ ನಿಗದಿಯಾಗಿತ್ತು. ಮೂರು ಪ್ರಮುಖ ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರವನ್ನು ಕಳೆದುಕೊಂಡಿದೆ.

ಏಪ್ರಿಲ್ ತಿಂಗಳ ಬಳಿಕ ಸೋನಿಯಾ ಅವರು ರಾಯ್‌ಬರೇಲಿಗೆ ಭೇಟಿ ನೀಡಿಲ್ಲ. ಅದಕ್ಕೂ ಮುನ್ನ 2016ರ ಮಧ್ಯಭಾಗದಲ್ಲಿ ಒಮ್ಮೆ ಭೇಟಿ ನೀಡಿದ್ದರು. ಅನಾರೋಗ್ಯದ ಕಾರಣ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಅವರು ಪ್ರಚಾರ ಕೈಗೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.