ADVERTISEMENT

ನ್ಯಾಯಬೆಲೆ ಅಂಗಡಿಗಳ ನಷ್ಟ ಪರಿಹಾರಕ್ಕೆ ಒತ್ತಾಯಿಸಿ ಪಿಎಂ ಮೋದಿ ಸಹೋದರ ಧರಣಿ

ಪಿಟಿಐ
Published 2 ಆಗಸ್ಟ್ 2022, 9:43 IST
Last Updated 2 ಆಗಸ್ಟ್ 2022, 9:43 IST
ಎಐಎಫ್‌ಪಿಎಸ್‌ಡಿಎಫ್‌ ಅಧ್ಯಕ್ಷ ಪ್ರಹ್ಲಾದ್‌ ಮೋದಿ
ಎಐಎಫ್‌ಪಿಎಸ್‌ಡಿಎಫ್‌ ಅಧ್ಯಕ್ಷ ಪ್ರಹ್ಲಾದ್‌ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್‌ಮೋದಿ ಅವರು ನ್ಯಾಯಬೆಲೆ ಅಂಗಡಿಗಳ ನಷ್ಟ ಪರಿಹಾರವನ್ನು ಭರಿಸುವಂತೆ ಒತ್ತಾಯಿಸಿ ಜೈಪುರದ ಜಂತರ್‌ ಮಂತರ್‌ನಲ್ಲಿ ಧರಣಿ ಕುಳಿತಿದ್ದಾರೆ. ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ (ಎಐಎಫ್‌ಪಿಎಸ್‌ಡಿಎಫ್‌) ನ ಅಧ್ಯಕ್ಷರು ಆಗಿರುವ ಪ್ರಹ್ಲಾದ್‌ ಮೋದಿ ಅವರು ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಸಂಘದ ಇತರ ಸದಸ್ಯರ ಜೊತೆ ಮಂಗಳವಾರ ಪ್ರತಿಭಟನೆ ಆರಂಭಿಸಿದ್ದಾರೆ.

ನಮ್ಮ ಉಳಿವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಬೇಡಿಕೆಗಳನ್ನು ಒಳಗೊಂಡ ದೊಡ್ಡ ಪಟ್ಟಿಯಿರುವ ಜ್ಞಾಪಕ ಪತ್ರವನ್ನು ಎಐಎಫ್‌ಪಿಎಸ್‌ಡಿಎಫ್‌ನ ನಿಯೋಗ ಸಲ್ಲಿಕೆ ಮಾಡಲಿದೆ. ಏರಿಕೆಯಾಗಿರುವ ದೈನಂದಿನ ಖರ್ಚುವೆಚ್ಚಗಳು ಮತ್ತು ಅಂಗಡಿಗಳನ್ನು ನಡೆಸಲು ಎದುರಾಗಿರುವ ಖರ್ಚುಗಳ ಹೆಚ್ಚಳದ ಮಧ್ಯೆ ನಮ್ಮ ಮಿತಿಯಲ್ಲಿ ಬರುವ ಪದಾರ್ಥಗಳಿಗೆ ಕೆ.ಜಿ.ಗೆ ಕೇವಲ 20 ಪೈಸೆ ಹೆಚ್ಚಳವಾಗಿರುವುದು ಒಂದು ಕ್ರೂರ ಹಾಸ್ಯವಾಗಿದೆ. ಕೇಂದ್ರ ಸರ್ಕಾರವು ನಮಗೆ ಹಣಕಾಸಿನ ನೆರವು ನೀಡಬೇಕು ಎಂದು ಪ್ರಹ್ಲಾದ್‌ ಮೋದಿ ಆಗ್ರಹಿಸಿದ್ದಾರೆ.

ಎಐಎಫ್‌ಪಿಎಸ್‌ಡಿಎಫ್‌ ತನ್ನ ಮುಂದಿನ ನಡೆಯ ಬಗ್ಗೆ ಚರ್ಚಿಸಲು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಬುಧವಾರ ನಡೆಸಲಿದೆ. ಬಳಿಕ ಮುಂದಿನ ನಿರ್ಣಯವನ್ನು ಕೈಗೊಳ್ಳಲಿದೆ ಎಂದು ಪ್ರಹ್ಲಾದ್‌ ಮೋದಿ ತಿಳಿಸಿದ್ದಾರೆ.

ADVERTISEMENT

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಬುಧವಾರ ಭೇಟಿ ಮಾಡುವ ಯೋಜನೆಯಿದೆ ಎಂದು ಎಐಎಫ್‌ಪಿಎಸ್‌ಡಿಎಫ್‌ನ ರಾಷ್ಟ್ರೀಯ ಕಾರ್ಯದರ್ಶಿ ಬಿಸ್ವಂಭರ್‌ ಬಸು ಹೇಳಿದ್ದಾರೆ.

ಅಕ್ಕಿ, ಗೋದಿ ಮತ್ತು ಸಕ್ಕರೆ ಪದಾರ್ಥಗಳ ಮಾರಾಟದಿಂದ ಆಗುತ್ತಿರುವ ನಷ್ಟಕ್ಕೆ ಪರಿಹಾರ ನೀಡಬೇಕು. ಅಡುಗೆ ಎಣ್ಣೆ, ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಮತ್ತು ದ್ವಿದಳ ಧಾನ್ಯಗಳು ನ್ಯಾಯಬೆಲೆ ಅಂಗಡಿಗಳ ಮುಖಾಂತರ ಸರಬರಾಜಾಗಬೇಕು ಎಂದು ಎಐಎಫ್‌ಪಿಎಸ್‌ಡಿಎಫ್‌ ಆಗ್ರಹಿಸಿದೆ.

‘ಪಶ್ಚಿಮ ಬಂಗಾಳದಲ್ಲಿ ಇರುವ ಹಾಗೆ ಉಚಿತವಾಗಿ ಪಡಿತರ ವಿತರಣೆ ಮಾಡುವ ವ್ಯವಸ್ಥೆಯನ್ನು ದೇಶದಾದಾದ್ಯಂತ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.