ಗುವಾಹಟಿ: ಪೊಲೀಸರು ಶಸ್ತ್ರಸಜ್ಜಿತ ಕಳ್ಳ ಬೇಟೆಗಾರರನೊಬ್ಬನನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಿರುವ ಘಟನೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಬುಧವಾರ ರಾತ್ರಿ ನಡೆದಿದೆ.
ರಾಷ್ಟ್ರೀಯ ಉದ್ಯಾನದ ಅಗೋರಟೋಲಿ ವಲಯದ ಧನಬಾರಿ ಬಳಿ ಈ ಘಟನೆ ನಡೆದಿದೆ ಎಂದು ಪಾರ್ಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಶಸ್ತ್ರಸಜ್ಜಿತ ಕಳ್ಳ ಬೇಟೆಗಾರರು ಖಡ್ಗಮೃಗ ಸೇರಿದಂತೆ ಇತರ ಪ್ರಾಣಿಗಳನ್ನು ಭೇಟೆಯಾಡಿ ಸಾಗಿಸಲು ಹೊಂಚುಹಾಕಿ ಧನಬಾರಿ ಬಳಿ ನುಗ್ಗಿದ್ದರು. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಕಾರ್ಯಾಚರಣೆ ನಡೆಸಲು ಸನ್ನದ್ದರಾಗಿದ್ದರು.
ರಾತ್ರಿ 10.30ರ ವೇಳೆ ಕಳ್ಳಬೇಟೆಗಾರರು ಪೊಲೀಸರ ಮೇಲೆ ಗುಂಡು ಹಾರಿಸಲು ಮುಂದಾದಾಗ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಆಗ ಒಬ್ಬ ಕಳ್ಳಬೇಟೆಗಾರ ಹತ್ಯೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಹತ್ಯೆಯಾದವನಿಂದ ಒಂದು ಎಕೆ 56 ರೈಫಲ್, 303 ರೈಫಲ್ ಹಾಗೂ ಕೊಡಲಿ, ಟಾರ್ಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾದವರಿಗೆ ಶೋಧ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.