ADVERTISEMENT

ಪೊಲೀಸರೊಂದಿಗೆ ಜಟಾಪಟಿ; ರೈತರ ಮೇಲೆ ಅಶ್ರುವಾಯು

ಹರಿಯಾಣ–ರಾಜಸ್ಥಾನ ಗಡಿಯಲ್ಲಿ ಘಟನೆ

ಪಿಟಿಐ
Published 31 ಡಿಸೆಂಬರ್ 2020, 20:29 IST
Last Updated 31 ಡಿಸೆಂಬರ್ 2020, 20:29 IST
ಹರಿಯಾಣದ ರೆವಾರಿಯಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು  –ಪಿಟಿಐ ಚಿತ್ರ
ಹರಿಯಾಣದ ರೆವಾರಿಯಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು  –ಪಿಟಿಐ ಚಿತ್ರ   

ಚಂಡೀಗಡ, ಜೈಪುರ, ನವದೆಹಲಿ: ರಾಜಸ್ಥಾನದ ಶಹಜಹಾನ್‌ಪುರ ಗಡಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ, ಬ್ಯಾರಿಕೇಡ್‌ಗಳನ್ನು ಮುರಿದ ಪ್ರತಿಭಟನಾಕಾರರ ಮೇಲೆ ಹರಿಯಾಣ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿದ ಘಟನೆ ಗುರುವಾರ ನಡೆದಿದೆ. ರೈತರು ಟ್ರ್ಯಾ‌ಕ್ಟರ್‌ಗಳಲ್ಲಿ ದೆಹಲಿಯತ್ತ ರ‍್ಯಾಲಿ ಹಮ್ಮಿಕೊಂಡಿದ್ದರು.

ರೈತರ ಒಂದು ತಂಡವು ಶಹಜಹಾನ್‌ಪುರ– ರೆವಾರಿ ಗಡಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ರಸ್ತೆಯನ್ನು ಬಂದ್ ಮಾಡಿದೆ. ರಾಜಸ್ಥಾನದ ಮೂಲಕ ಬಂದ ಮತ್ತೊಂದು ಗುಂಪು, ಹರಿಯಾಣ ಪ್ರವೇಶಿಸಲು ಟ್ರ್ಯಾಕ್ಟರ್‌ಗಳ ಮೂಲಕ ಯತ್ನಿಸಿತು. ಆದರೆ, ಇವರು ತಮ್ಮನ್ನು ಸಂಪರ್ಕಿಸಿರಲಿಲ್ಲ ಎಂದು ಸ್ಥಳದಲ್ಲಿರುವ ರೈತರು ಸ್ಪಷ್ಟಪಡಿಸಿದ್ದಾರೆ.

‘ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದೆ. ಕೆಲವು ರೈತರು ಒತ್ತಾಯಪೂರ್ವಕವಾಗಿ ಹರಿಯಾಣದೊಳಕ್ಕೆ ನುಗ್ಗುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ’ ಎಂದು ಕಿಸಾನ್ ಮಹಾಪಂಚಾಯತ್ ಅಧ್ಯಕ್ಷ ರಾಮಪಾಲ್ ಜಾಟ್ ಹೇಳಿದ್ದಾರೆ.

ADVERTISEMENT

‘ಬಹುತೇಕ ಯುವಕರೇ ಇದ್ದ ರೈತರ ಗುಂಪು, ಬ್ಯಾರಿಕೇಡ್‌ಗಳನ್ನು ತಳ್ಳಿ, ದೆಹಲಿಯತ್ತ ತೆರಳಲು ಯತ್ನಿಸಿತು. ಅವರನ್ನು ನಿಯಂತ್ರಿಸಲು ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗ ನಡೆಸಬೇಕಾಯಿತು’ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.

ಹೊಸ ವರ್ಷಾಚರಣೆ ಇಲ್ಲ: ಮೂರು ಕೃಷಿ ಮಾರುಕಟ್ಟೆ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೊಸ ವರ್ಷಾಚರಣೆ ಇಲ್ಲ ಎಂದು ದೆಹಲಿಯ ಸಿಂಘು ಗಡಿಯಲ್ಲಿ ತಿಂಗಳಿನಿಂದ ಬೀಡುಬಿಟ್ಟಿರುವ ರೈತರು ತಿಳಿಸಿದ್ದಾರೆ.

‘ಹೊಸ ವರ್ಷಾಚರಣೆ ದಿನ ಕುಟುಂಬಗಳಿಂದ ದೂರವಿದ್ದರೂ ಬೇಸರವಿಲ್ಲ, ಇಲ್ಲಿರುವ ಎಲ್ಲರೂ ನಮ್ಮ ಕುಟುಂಬ ಸದಸ್ಯರೇ ಆಗಿದ್ದಾರೆ. ಇವರಲ್ಲೇ ನಮ್ಮ ಸಹೋದರ, ಸಹೋದರಿಯರನ್ನು ಕಾಣುತ್ತಿದ್ದೇವೆ. ಸರ್ಕಾರ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಪರೀಕ್ಷಿಸಲು ಬಯಸಿದರೆ, ಅದನ್ನು ತೋರಿಸಲು ಸಿದ್ಧ. ಬೇಡಿಕೆ ಗಳು ಈಡೇರುವುದೇ ನಮಗೆ ಮುಖ್ಯ’ ಎಂದು ರೈತರು ಹೇಳಿದ್ದಾರೆ.

ಬುಧವಾರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ನಡುವೆ ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ ಎರಡು ವಿಚಾರಗಳಲ್ಲಿ ಸಹಮತಕ್ಕೆ ಬರಲಾಗಿದೆ. ವಿವಾದಿತ ಕೃಷಿ ಕಾಯ್ದೆಗಳ ರದ್ದತಿ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ವಿಚಾರಗಳು ಜನವರಿ 4ರಂದು ನಡೆಯುವ ಮತ್ತೊಂದು ಸುತ್ತಿನ ಸಭೆಯಲ್ಲಿ ಚರ್ಚೆಗೆ ಬರಲಿವೆ.

ನಿರ್ಣಯ ಬೆಂಬಲಿಸಿದ ಬಿಜೆಪಿ ಶಾಸಕ
ತಿರುವನಂತಪುರ ವರದಿ:
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಕೇರಳ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಗುರುವಾರ ನಿರ್ಣಯ ಅಂಗೀಕರಿಸಲಾಯಿತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ ನಿಲುವಳಿಗೆ ಸರ್ವಾನುಮತದಿಂದ ಅನುಮೋದನೆ ಸಿಕ್ಕಿತು. ಆದರೆ ವಿಧಾನಸಭೆಯ ಏಕೈಕ ಬಿಜೆಪಿ ಶಾಸಕ ಒ.ರಾಜಗೋಪಾಲ್ ಅವರೂ ನಿರ್ಣಯವನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದರು.

‘ನಾನು ನನ್ನ ಅಭಿಪ್ರಾಯಗಳನ್ನು ಹೇಳಿದ್ದೇನೆ. ನಿರ್ಣಯದ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯವಿತ್ತು. ಅದನ್ನು ನಾನು ಸದನದಲ್ಲಿ ಪ್ರಸ್ತಾಪಿಸಿದ್ದೇನೆ’ ಎಂದು ರಾಜಗೋಪಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.