ADVERTISEMENT

ಉಗ್ರನಿಗ್ರಹ ದಳ ಕಾರ್ಯಾಚರಣೆ;ಜೈಷ್‌ ಸಂಪರ್ಕ ಹೊಂದಿರುವ ಇಬ್ಬರು ಶಂಕಿತ ಉಗ್ರರ ಬಂಧನ

ಉತ್ತರ ಪ್ರದೇಶ

ಏಜೆನ್ಸೀಸ್
Published 22 ಫೆಬ್ರುವರಿ 2019, 10:19 IST
Last Updated 22 ಫೆಬ್ರುವರಿ 2019, 10:19 IST
   

ಉತ್ತರ ಪ್ರದೇಶ: ಸಹರನಪುರ ಜಿಲ್ಲೆಯ ದೇವಬಂದ್‌ನಲ್ಲಿ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಉಗ್ರ ನಿಗ್ರಹ ದಳ ಶುಕ್ರವಾರ ಘೋಷಿಸಿದೆ.

ಶಂಕಿತ ಉಗ್ರರ ಚಟುವಟಿಕೆಗಳ ಬಗ್ಗೆ ಖಚಿತ ಮಾಹಿತಿ ಪಡೆದು ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿರುವುದಾಗಿ ಡಿಜಿಪಿ ಒ.ಪಿ.ಸಿಂಗ್‌ ಹೇಳಿದ್ದಾರೆ.

ಉತ್ತರ ಪ್ರದೇಶ ಡಿಜಿಪಿ ಒ.ಪಿ.ಸಿಂಗ್‌

‘ಬಂಧಿತರು 20–25 ವರ್ಷ ವಯಸ್ಸಿನವರು ಹಾಗೂ ಜಮ್ಮು ಮತ್ತು ಕಾಶ್ಮೀರ ಮೂಲದವರಾಗಿದ್ದಾರೆ. ಇಬ್ಬರನ್ನೂ ಗುರುವಾರ ನಮ್ಮ ಉಗ್ರ ನಿಗ್ರಹ ದಳಬಂಧಿಸಿದೆ. ಬಂಧಿತ ಶಹನವಾಜ್‌ ಕುಲಗಾಮ್‌ ಪ್ರದೇಶದವನು ಹಾಗೂ ಅಕಿಬ್‌ ಪುಲ್ವಾಮಾದವನಾಗಿದ್ದು,ಶಸ್ತ್ರಾಸ್ತ್ರಗಳು, ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

ADVERTISEMENT

ಶಂಕಿತ ಉಗ್ರ ಶಹನವಾಜ್‌ ಗ್ರೆನೇಡ್‌ನಲ್ಲಿ ತಜ್ಞತೆ ಹೊಂದಿದ್ದಾನೆ ಎನ್ನಲಾಗಿದೆ. ಕಾಶ್ಮೀರದಿಂದಅವರು ಇಲ್ಲಿಗೆ ಬಂದದ್ದೇಕೆ, ಯಾರು ಅವರಿಗೆ ಹಣಕಾಸು ಸಹಕಾರ ನೀಡುತ್ತಿದ್ದಾರೆ, ಅವರ ಟಾರ್ಗೆಟ್‌ ಏನಾಗಿತ್ತು,..ಎಲ್ಲದರ ಬಗ್ಗೆ ತನಿಖೆ ನಡೆಸಲಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.

ಗುಪ್ತಚರ ಮಾಹಿತಿ ಖಚಿತ ಪಡಿಸಿಕೊಂಡ ನಂತರವೇ ಉಗ್ರ ನಿಗ್ರಹ ದಳ ಕಾರ್ಯಾಚರಣೆ ನಡೆಸಿದೆ. ಶಂಕಿತ ಉಗ್ರರಿಂದ ವಿಡಿಯೊ ತುಣುಕುಗಳು, ಮೊಬೈಲ್‌ನಲ್ಲಿನ ಸಂದೇಶಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದರು. ಪೊಲೀಸರ ಪ್ರಕಾರ, ಈ ಇಬ್ಬರೂ ಜೈಷ್‌–ಎ–ಮೊಹಮ್ಮದ್‌ ಸಂಘಟನೆಗೆ ಹೊಸ ಯುವಕರನ್ನು ನೇಮಕ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದರು.

’ದೇಶದ ಶತ್ರುಗಳಿಗೆ ಇದೊಂದು ಸಂದೇಶವಾಗಿದ್ದು, ಉಗ್ರರು ಮುಂದೆ ಅಡಗಿಕೊಳ್ಳಲು ಅವಕಾಶವಿಲ್ಲ’ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.