ADVERTISEMENT

ಆರ್‌.ಜಿ.ಕರ್ ಪ್ರಕರಣ: ಮಮತಾ ಬ್ಯಾನರ್ಜಿ ಬಗ್ಗೆ ಸಂತ್ರಸ್ತೆಯ ಪೋಷಕರು ಹೇಳಿದ್ದೇನು?

ಪಿಟಿಐ
Published 25 ಜನವರಿ 2025, 14:06 IST
Last Updated 25 ಜನವರಿ 2025, 14:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ತಮ್ಮ ಮಗಳ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಲು ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ನಡೆಸಿದ್ದಾರೆ ಎನ್ನಲಾದ ಯತ್ನದ ಹೊಣೆಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಪ್ಪಿಸಿಕೊಳ್ಳಲಾಗದು ಎಂದು ಸಂತ್ರಸ್ತೆಯ ತಂದೆ–ತಾಯಿ ಹೇಳಿದ್ದಾರೆ.

ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ಅಪರಾಧ ಕೃತ್ಯದ ಮುಖ್ಯ ಪಿತೂರಿಕೋರರನ್ನು ರಕ್ಷಿಸಲು ಯತ್ನಿಸಿದರು. ದೊಡ್ಡ ಪಿತೂರಿಯ ಆಯಾಮವನ್ನು ಸಿಬಿಐ ಅಧಿಕಾರಿಗಳು ಉಪೇಕ್ಷಿಸಿದರು, ಅತ್ಯಾಚಾರ ಹಾಗೂ ಕೊಲೆ ನಡೆಯಲು ಕಾರಣರಾದ ಎಲ್ಲರನ್ನೂ ಕಾನೂನಿನ ಕುಣಿಕೆಗೆ ಸಿಲುಕಿಸಲು ಅವರಿಗೆ ಆಗಲಿಲ್ಲ ಎಂದು ‍ತಂದೆ–ತಾಯಿ ದೂರಿದ್ದಾರೆ.

ಈ ಆರೋಪಗಳು ದುರದೃಷ್ಟಕರ ಎಂದು ಆಡಳಿತಾರೂಢ ಟಿಎಂಸಿ ಹೇಳಿದೆ. ‘ಕೋಲ್ಕತ್ತ ಪೊಲೀಸರು, ಆಸ್ಪತ್ರೆಯ ಆಡಳಿತ ಮತ್ತು ಟಿಎಂಸಿ ಪಕ್ಷದ ಜನಪ್ರತಿನಿಧಿಗಳು ಈ ‍ಪೈಶಾಚಿಕ ಕೃತ್ಯವನ್ನು ಮುಚ್ಚಿಹಾಕಲು, ಸತ್ಯವು ಹೊರಗಡೆ ಬರದಂತೆ ನೋಡಿಕೊಳ್ಳಲು ಯತ್ನಿಸಿದರು’ ಎಂದು ಸಂತ್ರಸ್ತೆಯ ತಾಯಿಯು ಸುದ್ದಿವಾಹಿನಿಯೊಂದರ ಬಳಿ ಶುಕ್ರವಾರ ಹೇಳಿದ್ದಾರೆ.

ADVERTISEMENT

ಸತ್ಯವನ್ನು ಮುಚ್ಚಿಟ್ಟ ಆರೋಪದ ಬಗ್ಗೆ ಗಮನಹರಿಸುವ ಕೆಲಸವನ್ನು ಸಿಬಿಐ ಮಾಡಿಲ್ಲ. ರಾಜ್ಯ ಸರ್ಕಾರವು ಕರ್ತವ್ಯನಿರತ ವೈದ್ಯೆಯೊಬ್ಬಳಿಗೆ ಕೆಲಸದ ಸ್ಥಳದಲ್ಲಿ ರಕ್ಷಣೆ ನೀಡಲು ವಿಫಲವಾಯಿತು. ನಂತರದಲ್ಲಿ ಅದು ಅಪರಾಧ ಕೃತ್ಯದ ಹಿಂದಿನ ಪಿತೂರಿಯ ಆಯಾಮವನ್ನು ಮುಚ್ಚಿಡಲು ಯತ್ನಿಸಿತು ಎಂದು ತಾಯಿ ದೂರಿದ್ದಾರೆ.

‘ಮುಖ್ಯಮಂತ್ರಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ಕೆಲವು ಶಕ್ತಿಗಳ ಪ್ರೇರಣೆಯಿಂದ ಈ ರೀತಿ ದೂರಿರುವಂತೆ ಕಾಣುತ್ತಿದೆ’ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

ಮರಣ ದಂಡನೆಗೆ ವಿರೋಧ

ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಆಕೆಯ ಹತ್ಯೆ ಮಾಡಿದ ಸಂಜಯ್‌ ರಾಯ್‌ಗೆ ಮರಣ ದಂಡನೆ ನೀಡದೆ ಜೀವಾವಧಿ ಶಿಕ್ಷೆ ವಿಧಿಸಿದ ಸಿಯಾಲದಹ ನ್ಯಾಯಾಲಯದ ಕ್ರಮದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದರೂ ಮರಣ ದಂಡನೆಯನ್ನು ಯಾರಿಗೂ ವಿಧಿಸಬಾರದು ಎಂದು ನ್ಯಾಯಶಾಸ್ತ್ರ ಪರಿಣತರು ಹೇಳಿದ್ದಾರೆ.

ಮರಣ ದಂಡನೆಯು ಪ್ರಜಾತಂತ್ರಕ್ಕೆ ವಿರೋಧಿ ಈ ಶಿಕ್ಷೆಯನ್ನು ಒಮ್ಮೆ ವಿಧಿಸಿದ ನಂತರ ಅದನ್ನು ಹಿಂದಕ್ಕೆ ಪಡೆಯಲು ಅವಕಾಶವೇ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಶೋಕ್ ಗಂಗೂಲಿ ಹೇಳಿದ್ದಾರೆ. ರಾಯ್‌ಗೆ ಮರಣ ದಂಡನೆ ವಿಧಿಸಬೇಕು ಎಂಬ ಬೇಡಿಕೆಯು ನ್ಯಾಯಸಮ್ಮತವಲ್ಲ ವಿಶ್ವದ 150ಕ್ಕೂ ಹೆಚ್ಚಿನ ದೇಶಗಳಲ್ಲಿ ಮರಣ ದಂಡನೆ ಇಲ್ಲ ಎಂದು ಗಂಗೂಲಿ ಹೇಳಿದ್ದಾರೆ.

‘ಮರಣ ದಂಡನೆಯು ಸುಲಭದ ಪರಿಹಾರ ಮಾರ್ಗ ಎಂಬ ನಂಬಿಕೆಯೊಂದಿಗೆ ನಾವು ಆ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ನಿರ್ಭಯಾ ಪ್ರಕರಣದಲ್ಲಿ ನಾಲ್ಕು ಮಂದಿಗೆ ಮರಣ ದಂಡನೆ ವಿಧಿಸಲಾಯಿತು. ಅವರಿಗೆ ಶಿಕ್ಷೆಯಾದ ನಂತರದಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಕಡಿಮೆ ಆಗಿಲ್ಲ. ಇಂತಹ ಪ್ರಕರಣಗಳು ಹೆಚ್ಚಾಗಿವೆ. ಅಂದರೆ ಮರಣ ದಂಡನೆಯು ಅಪರಾಧ ಎಸಗುವುದನ್ನು ತಡೆಯುವ ಕೆಲಸ ಮಾಡಿಲ್ಲ ಎಂದು ಅವರು ವಿವರಿಸಿದ್ದಾರೆ.

ಪಶ್ಚಿಮ ಬಂಗಾಳದ ಮಾಜಿ ಅಡ್ವೊಕೇಟ್ ಜನರಲ್ ಜಯಂತ ಮಿತ್ರ ಅವರು ಮರಣ ದಂಡನೆಯನ್ನು ತಾವು ಸಂಪೂರ್ಣವಾಗಿ ವಿರೋಧಿಸುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.