ADVERTISEMENT

ಆಪರೇಷನ್‌ ಸಿಂಧೂರ| ಸೇನೆಯ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ ಪೊಲೀಸರು:ಚೌಧರಿ

ಆಪರೇಷನ್‌ ಸಿಂಧೂರ– ದಲ್ಜಿತ್‌ ಸಿಂಗ್‌ ಚೌಧರಿ ಅಭಿಪ್ರಾಯ

ಪಿಟಿಐ
Published 17 ಅಕ್ಟೋಬರ್ 2025, 14:14 IST
Last Updated 17 ಅಕ್ಟೋಬರ್ 2025, 14:14 IST
ದಲ್ಜಿತ್‌ ಸಿಂಗ್‌ ಚೌಧರಿ
ದಲ್ಜಿತ್‌ ಸಿಂಗ್‌ ಚೌಧರಿ   

ಹೈದರಾಬಾದ್‌: ಪಾಕಿಸ್ತಾನ ಸೇನೆಯ ವಿರುದ್ಧ ಭಾರತ ನಡೆಸಿದ್ದ ‘ಆಪರೇಷನ್‌ ಸಿಂಧೂರ’ದ ವೇಳೆ ಭದ್ರತಾ ಪಡೆಗಳ ಜೊತೆ ಪೊಲೀಸರು ಹೆಗಲಿಗೆ ಹೆಗಲು ನೀಡಿ ಕೆಲಸ ಮಾಡಿದ್ದರು’ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮಹಾ ನಿರ್ದೇಶಕ ದಲ್ಜಿತ್‌ ಸಿಂಗ್‌ ಚೌಧರಿ ತಿಳಿಸಿದ್ದಾರೆ.

ಇಲ್ಲಿನ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) 77ನೇ ಬ್ಯಾಚ್‌ನ ಪ್ರೊಬೇಷನರಿ ಅಧಿಕಾರಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ದೇಶಕ್ಕೆ ಎದುರಾಗುವ ಸವಾಲುಗಳ ಸಂದರ್ಭದಲ್ಲಿ ಪೊಲೀಸ್‌ ಏಕಾಂಗಿಯಾಗಿ ನಿಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. 

‘ಆಪರೇಷನ್‌ ಸಿಂಧೂರದ ವೇಳೆ ಪೊಲೀಸರು ಕೂಡ ಸೇನೆಯ ಜೊತೆಗೆ ಹೆಗಲಿಗೆ ಹೆಗಲು ನೀಡಿ ಕೆಲಸ ಮಾಡಿದ್ದರು. ದೇಶದ ಭದ್ರತೆ ವಿಚಾರದಲ್ಲಿ ಇಂತಹ ಸಮನ್ವಯವು ಅಗತ್ಯವಾಗಿದೆ. ಕೇವಲ ಒಂದು ಸಂಸ್ಥೆಗಷ್ಟೇ ಇಂತಹ ಕೆಲಸ ಸೀಮಿತವಲ್ಲ, ಬದಲಾಗಿ ಜಂಟಿ ಹೊಣೆಗಾರಿಕೆಯಿಂದ ಕೆಲಸ ಮಾಡಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಈಗಿನ ಕಾಲಘಟ್ಟದಲ್ಲಿ ಐಪಿಎಸ್‌ ಅಧಿಕಾರಿಗಳು ರಾಜ್ಯ ಹಾಗೂ ಜನರ ನಂಬಿಕೆ ಬೆಸೆಯುವ ಸೇತುವೆಯಾಗಿದ್ದಾರೆ. ಅಪರಾಧ ಪ್ರಕರಣಗಳನ್ನು ತಡೆಯುವುದರ ಜೊತೆಗೆ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ಕೈಗೊಳ್ಳುವುದು, ಮಾದಕ ಪದಾರ್ಥಗಳ ಕಳ್ಳಸಾಗಣೆ ತಡೆದು ಸಾಮಾಜಿಕ ಹಾಗೂ ಆರ್ಥಿಕ ಕಾನೂನನ್ನು ಎತ್ತಿ ಹಿಡಿಯುವುದು ಐಪಿಎಸ್‌ ಅಧಿಕಾರಿಗಳ ಆದ್ಯ ಕರ್ತವ್ಯವಾಗಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.