ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರಿಗೆ ಮನವಿ ಮಾಡಿದರು.
ಸಿಇಸಿ ಮತ್ತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದರು.
‘ಒಂದೇ ಹಂತದಲ್ಲಿ ಚುನಾವಣೆ ನಡೆಸಬೇಕೆಂದು ಎಲ್ಲ ಪಕ್ಷಗಳು ಒತ್ತಾಯಿಸಿವೆ. ಆದರೆ, ರಾಜ್ಯದ ಹಬ್ಬಗಳನ್ನು ಗಮನಿಸಿ ಮತದಾನದ ದಿನವನ್ನು ನಿಗದಿಪಡಿಸಲಾಗುವುದು’ ಎಂದು ಸಿಇಸಿ ತಿಳಿಸಿದರು.
ಮತದಾರರ ವಯಸ್ಸಿನ ವಿವರಗಳನ್ನು ಪ್ರಕಟಿಸಲು ಜಿಲ್ಲಾ ಚುನಾವಣಾಧಿಕಾರಿಗಳು ನಿರಾಕರಿಸುತ್ತಿರುವುದಕ್ಕೆ ಆಡಳಿತಾರೂಢ ಡಿಎಂಕೆ ಆಕ್ಷೇಪಿಸಿದೆ. ಅಲ್ಲದೆ, ಏಕರೂಪದ ಮತ್ತು ಪ್ರಮಾಣಿತ ಮತದಾರರ ಪಟ್ಟಿಯನ್ನು ಪ್ರಕಟಿಸುವಂತೆ ಮುಖ್ಯ ಚುನಾವಣಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದೆ.
‘ಈಗಾಗಲೇ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಇತರ ವಿವರಗಳನ್ನು ಗಣತಿ ನಮೂನೆಗೆ ಅನುಗುಣವಾಗಿ ದಾಖಲಿಸಿಲ್ಲ. ಹಳೆಯ ಮತದಾರರ ಪಟ್ಟಿಯ ವಿವರಗಳನ್ನೇ ಉಲ್ಲೇಖಿಸಲಾಗಿದೆ. ಇದನ್ನು ಶೀಘ್ರದಲ್ಲೇ ಸರಿಪಡಿಸಬೇಕು. ಇದಕ್ಕಾಗಿ ವಿಶೇಷ ಅಭಿಯಾನ ನಡೆಸಬೇಕು’ ಎಂದು ಡಿಎಂಕೆ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.