ADVERTISEMENT

ಸುಳ್ಳು ಸುದ್ದಿಯಿಂದ ಚುನಾವಣಾ ಪ್ರಕ್ರಿಯೆ ವಿಶ್ವಾಸಾರ್ಹತೆಗೆ ಧಕ್ಕೆ:ಮುಖ್ಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 15:36 IST
Last Updated 23 ಜನವರಿ 2025, 15:36 IST
ರಾಜೀವ್‌ ಕುಮಾರ್
ರಾಜೀವ್‌ ಕುಮಾರ್   

ನವದೆಹಲಿ: ‘ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳ ಪ್ರಸಾರದಿಂದ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಹೆಚ್ಚು ಧಕ್ಕೆ ಉಂಟಾಗಲಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಅವರು ಗುರುವಾರ ಹೇಳಿದರು. 

‘ಚುನಾವಣಾ ವ್ಯವಸ್ಥೆಯ ಪ್ರಮುಖ ಹಂತಗಳ ಸಂದರ್ಭಗಳನ್ನೇ ಗುರಿಯಾಗಿಸಿ ಸುಳ್ಳು ಸುದ್ದಿಗಳನ್ನು ಪ್ರಸರಣ ಮಾಡಲಾಗುತ್ತದೆ’ ಎಂದು ಹೇಳಿದರು.

ಚುನಾವಣಾ ಆಯೋಗ ಇಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ವಿವಿಧ ರಾಷ್ಟ್ರಗಳ ಚುನಾವಣಾ ಆಯೋಗಗಳ ಪ್ರಮುಖರು ಭಾಗವಹಿಸಿದ್ದರು.

ADVERTISEMENT

ಸಮ್ಮೇಳನದಲ್ಲಿ ಭಾಗವಹಿಸಿದ್ದ ಶ್ರೀಲಂಕಾ, ಉಜ್ಬೇಕಿಸ್ತಾನ, ಮಾರಿಷಸ್, ಇಂಡೊನೇಷ್ಯಾ, ಕಜಕಸ್ತಾನದ ಚುನಾವಣಾ ನಿರ್ವಹಣಾ ಸಂಸ್ಥೆಗಳ ಪ್ರತಿನಿಧಿಗಳು ಕೂಡ ಚುನಾವಣಾ ಪ್ರಕ್ರಿಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವ ಸುಳ್ಳು ಮಾಹಿತಿಗಳ ಕುರಿತು ಕಳವಳ ವ್ಯಕ್ತಪಡಿಸಿದರು.

ನಮೀಬಿಯಾ, ಇಂಡೊನೇಷ್ಯಾದ ಸಿಇಸಿಗಳು, ನಕಲಿ ಸುದ್ದಿಗಳ ಹಾವಳಿ ತಡೆಗೆ ತ್ವರಿತವಾಗಿ ಮಾಹಿತಿ ಹಂಚಿಕೊಳ್ಳಲು ಪ್ರತ್ಯೇಕ ವಾಟ್ಸ್ಆ್ಯಪ್‌ ಚಾನಲ್‌ ಹೊಂದುವ ಸಾಧ್ಯತೆ ಕುರಿತ ಸಲಹೆ ಮುಂದಿಟ್ಟರು.

ತಮ್ಮ ಭಾಷಣದಲ್ಲಿ ರಾಜೀವ್ ಕುಮಾರ್ ಅವರು, ಕೃತಕಬುದ್ಧಿಮತ್ತೆ (ಎ.ಐ) ಬೆಂಬಲಿತ ಚುನಾವಣಾ ಪ್ರಕ್ರಿಯೆ, ಆನ್‌ಲೈನ್‌ ಮತದಾನ, ಗುರುತಿನ ಖಾತರಿಗೆ ಬಯೊಮೆಟ್ರಿಕ್‌ ಬಳಕೆ ಸಾಧ್ಯತೆ ಉಲ್ಲೇಖಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.