ADVERTISEMENT

ಯಮುನಾ ನೀರು | ಗುಣಮಟ್ಟ ಇಲ್ಲ: ಸಂಸದೀಯ ಸಮಿತಿ

ಪಿಟಿಐ
Published 13 ಮಾರ್ಚ್ 2025, 15:48 IST
Last Updated 13 ಮಾರ್ಚ್ 2025, 15:48 IST
.
.   

ನವದೆಹಲಿ: ‘ದೆಹಲಿ ಪ್ರದೇಶದ ವ್ಯಾಪ್ತಿಯಲ್ಲಿ ಯಮುನಾ ನದಿಯು ತೀವ್ರ ಪ್ರಮಾಣದಲ್ಲಿ ಕಲುಷಿತವಾಗಿದೆ. ರಾಷ್ಟ್ರ ರಾಜಧಾನಿಯ ಆರು ತಾಣಗಳೂ ಸೇರಿದಂತೆ ಒಟ್ಟು 33 ಕಡೆಗಳಲ್ಲಿ ಗುಣಮಟ್ಟ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 23 ಕಡೆಗಳಲ್ಲಿ ನೀರಿನ ಗುಣಮಟ್ಟ ಪ್ರಾಥಮಿಕ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ‌’ ಎಂದು ಸಂಸದೀಯ ಸಮಿತಿಯೊಂದು ತಿಳಿಸಿದೆ.

ಯಮುನಾ ನದಿಯು ದೆಹಲಿಯ 40 ಕಿ.ಮೀ ವ್ಯಾಪ್ತಿಯಲ್ಲಿ ಹರಿಯುತ್ತದೆ. ಅದು ಹರಿಯಾಣದ ಪಾಲಾ ಮೂಲಕ ದೆಹಲಿ ಪ್ರವೇಶಿಸಿ, ಅಸ್ಗರ್‌ಪುರ ಮೂಲಕ ಉತ್ತರ ಪ್ರದೇಶದತ್ತ ಸಾಗುತ್ತದೆ.

ದೆಹಲಿ ವ್ಯಾಪ್ತಿಯಲ್ಲಿ ಹರಿಯುವ ಯಮುನಾ ನದಿಯಲ್ಲಿ ಜೀವಿಗಳಿಗೆ ಅಗತ್ಯವಿರುವಷ್ಟು ಕರಗಿದ ಆಮ್ಲಜನಕ (ಡಿಒ) ಇಲ್ಲವಾಗಿದೆ ಎಂದು ಜಲಸಂಪನ್ಮೂಲ ಸಂಸದೀಯ ಸ್ಥಾಯಿ ಸಮಿತಿ ಮಂಗಳವಾರ ಸಂಸತ್ತಿನಲ್ಲಿ ವರದಿ ಮಂಡಿಸಿದೆ.

ADVERTISEMENT

ಮೇಲ್ವಿಚಾರಣೆ ನಡೆಸಲಾದ 33 ತಾಣಗಳ ಪೈಕಿ ಉತ್ತರಾಖಂಡದ ನಾಲ್ಕು ಮತ್ತು ಹಿಮಾಚಲ ಪ್ರದೇಶದ ನಾಲ್ಕು ಕಡೆಗಳಲ್ಲಿ ಮಾತ್ರ ನೀರು ಪ್ರಾಥಮಿಕ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದೆ ಎಂದು ವರದಿ ಹೇಳಿದೆ.

ಯಮುನಾ ನದಿ ಶುಚಿಗೊಳಿಸುವ ಯೋಜನೆ ಭಾಗವಾಗಿ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ನಿರ್ಮಾಣ ಮತ್ತು ನವೀಕರಣ ಕಾರ್ಯಗಳ ಹೊರತಾಗಿಯೂ ಮಾಲಿನ್ಯವು ಆತಂಕಕಾರಿ ಮಟ್ಟದಲ್ಲಿದೆ ಎಂದು ಸಮಿತಿ ತಿಳಿಸಿದೆ.

ಒತ್ತುವರಿಯನ್ನು ತ್ವರಿತವಾಗಿ ತೆರವುಗೊಳಿಸುವುದರ ಜತೆಗೆ ಮಳೆ ನೀರು ಸರಾಗವಾಗಿ ನದಿ ಸೇರುವ ವ್ಯವಸ್ಥೆ ಕಲ್ಪಿಸುವಂತೆ ಸಮಿತಿ ಒತ್ತಾಯಿಸಿದೆ. 

ಅನುದಾನದ ಅಸಮರ್ಪಕ ಬಳಕೆ:

ಜಲಸಂಪನ್ಮೂಲ ಇಲಾಖೆ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಗೆ 2024ರ ಡಿಸೆಂಬರ್‌ ಅಂತ್ಯದ ವೇಳೆಗೆ ಹಂಚಿಕೆಯಾಗಿದ್ದ ಅನುದಾನದ ಪೈಕಿ ಶೇ 58ರಷ್ಟು ಮಾತ್ರ ಬಳಕೆಯಾಗಿದೆ ಎಂದು ಸಂಸದೀಯ ಸಮಿತಿ ಹೇಳಿದೆ. 2024–25ರಲ್ಲಿ 21640 ಕೋಟಿ (ಪರಿಷ್ಕೃತ) ಹಂಚಿಕೆ ಮಾಡಲಾಗಿತ್ತು. ಹಂಚಿಕೆಯಾದ ನಿಧಿಯಲ್ಲಿ ಶೇ 40ಕ್ಕೂ ಹೆಚ್ಚು ಪಾಲು ಬಳಕೆಯಾಗಿಲ್ಲ ಎಂದು ಸಮಿತಿ ಹೇಳಿದೆ. ಇದು ನಿಧಿ ಬಳಕೆ ಮತ್ತು ಯೋಜನೆ ಕಾರ್ಯಗತವನ್ನು ವಿಳಂಬಗೊಳಿಸಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಸಮಿತಿ ಹೇಳಿದೆ. ಮೇಲ್ವಿಚಾರಣೆ ಮತ್ತು ಅನುಷ್ಠಾನ ಕಾರ್ಯವಿಧಾನವನ್ನು ಬಲಪಡಿಸುವಂತೆ ಸಮಿತಿಯು ಜಲಶಕ್ತಿ ಸಚಿವಾಲಯವನ್ನು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.