ADVERTISEMENT

ಎರಡನೇ ಶೃಂಗಸಭೆಗೆ ಕಿಮ್ ಒಪ್ಪಿಗೆ: ಪಾಂಪಿಯೊ

ಏಜೆನ್ಸೀಸ್
Published 7 ಅಕ್ಟೋಬರ್ 2018, 17:59 IST
Last Updated 7 ಅಕ್ಟೋಬರ್ 2018, 17:59 IST
ಪಾಂಪಿಯೊ
ಪಾಂಪಿಯೊ   

ಸೋಲ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಉನ್ ಜಾಂಗ್ ಅವರ ಜೊತೆಗಿನ ಮಾತುಕತೆಯಲ್ಲಿ ಪ್ರಗತಿ ಕಂಡುಬಂದಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

ಭಾನುವಾರ ಬೆಳಗ್ಗೆ ಪ್ಯೊಂಗ್ಯೊಂಗ್‌ನಲ್ಲಿ ಕಿಮ್ ಜೊತೆ ಎರಡು ತಾಸು ಅವರು ಮಾತುಕತೆ ನಡೆಸಿದರು. ಅಣ್ವಸ್ತ್ರ ನಿಶ್ಯಸ್ತ್ರೀಕರಣ, ಅಮೆರಿಕ–ಉತ್ತರ ಕೊರಿಯಾ ನಡುವಣ ಉದ್ದೇಶಿತ ಎರಡನೇ ಶೃಂಗಸಭೆ ವಿಚಾರಗಳು ಚರ್ಚೆಗೆ ಬಂದವು. ‘ಕಳೆದ ಬಾರಿಯ ಭೇಟಿಗಿಂತ ಇದು ಉತ್ತಮವಾಗಿತ್ತು’ ಎಂದು ಪಾಂಪಿಯೊ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಉತ್ತರ ಕೊರಿಯಾಕ್ಕೆ ಪಾಂಪಿಯೊ ಅವರು ನೀಡಿದ ನಾಲ್ಕನೇ ಭೇಟಿ. ಟ್ರಂಪ್ ಅವರು ಕಿಮ್ ಅವರನ್ನು ಸಿಂಗಪುರದಲ್ಲಿ ನಡೆದ ಉಭಯ ದೇಶಗಳ ಮೊಟ್ಟಮೊದಲ ಶೃಂಗಸಭೆಯಲ್ಲಿ ಭೇಟಿಯಾಗಿದ್ದರು.

ADVERTISEMENT

ಪಾಂಪಿಯೊ ಜೊತೆಗಿನ ಭೇಟಿಗೆ ಕಿಮ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕೊರಿಯಾಕ್ಕೆ ಭೇಟಿ ನೀಡುವ ಮೊದಲು ಮಾನತಾಡಿದ್ದ ಪಾಂಪಿಯೊ, ಶಾಂತಿ ನೆಲೆಸುವ ಸಲುವಾಗಿ ಎರಡೂ ದೇಶಗಳ ನಡುವೆ ಅಗತ್ಯ ವಿಶ್ವಾಸ ಮೂಡಿಸುವುದು ತಮ್ಮ ಭೇಟಿಯ ಗುರಿ ಎಂದು ಹೇಳಿದ್ದರು. ಅವರು ಭಾನುವಾರ ಮಧ್ಯಾಹ್ನ ದಕ್ಷಿಣ ಕೊರಿಯಾಕ್ಕೆ ತೆರಳಿದರು.

ಅಮೆರಿಕ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸದ ಹೊರತು ನಿಶ್ಯಸ್ತ್ರೀಕರಣಕ್ಕೆ ಮುಂದಾಗಲು ಸಾಧ್ಯವಿಲ್ಲ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವರು ಕಳೆದ ತಿಂಗಳು ವಿಶ್ವಸಂಸ್ಥೆಗೆ ತಿಳಿಸಿದ್ದರು.

ರಷ್ಯಾ, ಚೀನಾ, ದಕ್ಷಿಣ ಕೊರಿಯಾ ಕೂಡಾ ನಿರ್ಬಂಧ ಸಡಿಲಿಸುವಂತೆ ಕೇಳಿದ್ದು, ಅಮೆರಿಕ ಈ ನಿಟ್ಟಿನಲ್ಲಿ ಪರಿಶೀಲಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಿಂಗಪುರ ಶೃಂಗಸಭೆಯ ಒಪ್ಪಂದ ಜಾರಿಯಲ್ಲಿ ಸಾಕಷ್ಟು ಪ್ರಗತಿ ಕಂಡುಬರದ ಕಾರಣ, ಟ್ರಂಪ್ ಅವರು ತಮ್ಮ ಉದ್ದೇಶಿತ ಉತ್ತರ ಕೊರಿಯಾ ಭೇಟಿಯನ್ನು ಕೈಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.