ನವದೆಹಲಿ: ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಇಂದು (ಸೋಮವಾರ) ನಿಧನರಾಗಿದ್ದಾರೆ. ಇದರಿಂದ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.
2021 ಮತ್ತು 2024ರಲ್ಲಿ ಎರಡು ಬಾರಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದ ಪ್ರಧಾನಿ ಮೋದಿ ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದರು. ಮೋದಿ ಅವರ ಆಹ್ವಾನವನ್ನು ಅವರು ಸ್ವೀಕರಿಸಿದ್ದರು.
ಕಳೆದ ಡಿಸೆಂಬರ್‌ನಲ್ಲಿ ವ್ಯಾಟಿಕನ್ ಸಿಟಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಜಾರ್ಜ್ ಕುರಿಯನ್, ಪೋಪ್ ಫ್ರಾನ್ಸಿಸ್ 2025ರ ನಂತರ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದರು.
1999ರಲ್ಲಿ ಪೋಪ್ ಜಾನ್ ಪಾಲ್ II ಅವರು ಕೊನೆಯದಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಏಷ್ಯಾದ ಬಿಷಪ್‌ಗಳ ಸಿನೊಡ್‌ನ ವಿಶೇಷ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲು ನವದೆಹಲಿಗೆ ಬಂದಿದ್ದ ಅವರು, ಆಗಿನ ಉಪರಾಷ್ಟ್ರಪತಿ ಕೃಷ್ಣಕಾಂತ್ ಮತ್ತು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ದರು.
ಇದಕ್ಕೂ ಮೊದಲು ಪೋಪ್ ಜಾನ್ ಪಾಲ್ II ಅವರು 1986ರ ಫೆಬ್ರುವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ದೇಶದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಿದ್ದ ಅವರು ಕೊಲ್ಕತ್ತದ ಮಿಷನರೀಸ್ ಆಫ್ ಚಾರಿಟಿಗೆ ಭೇಟಿ ನೀಡಿದ್ದರು. ಅಲ್ಲದೇ ದೇಶದ ಪ್ರಮುಖ ನಾಯಕರನ್ನೂ ಭೇಟಿಯಾಗಿದ್ದರು.
ಭಾರತಕ್ಕೆ ಭೇಟಿ ನೀಡಿದ ಮೊದಲ ಪೋಪ್ ಪಾಲ್ IV. ಇವರು 1964ರಲ್ಲಿ ಅಂತರರಾಷ್ಟ್ರೀಯ ಯೂಕರಿಸ್ಟಿಕ್ ಕಾಂಗ್ರೆಸ್‌ನಲ್ಲಿ (International Eucharistic Congress) ಭಾಗವಹಿಸಲು ಮುಂಬೈಗೆ ಭೇಟಿ ನೀಡಿದ್ದರು.
2021ರ ಅಕ್ಟೋಬರ್‌ನಲ್ಲಿ ರೋಮ್‌ನಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ ಪೋಪ್ ಫ್ರಾನ್ಸಿಸ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು.
ಬಳಿಕ 2024ರ ಜೂನ್‌ನಲ್ಲಿ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ ಭಾರತಕ್ಕೆ ಭೇಟಿ ನೀಡುವಂತೆ ಮತ್ತೆ ಆಹ್ವಾನಿಸಿದ್ದರು.
ಪೋಪ್ ಹುದ್ದೆಗೇರಿದ ಲ್ಯಾಟಿನ್ ಅಮೆರಿಕದ ಮೊದಲ ಧರ್ಮಗುರು ಎನಿಸಿರುವ ಅವರು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ 7.35ಕ್ಕೆ ಅವರು ನಿಧನರಾದರು ಎಂದು ವ್ಯಾಟಿಕನ್‌ನ ಪ್ರಕಟಣೆ ತಿಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.