
ಸಾಂದರ್ಭಿಕ ಚಿತ್ರ
ಕೃಪೆ: ಐಸ್ಟಾಕ್
ಅಹಮದಾಬಾದ್: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ದಂಪತಿ ಹಾಗೂ ಅವರ ಮೂರು ವರ್ಷದ ಮಗುವನ್ನು ಲಿಬಿಯಾದಲ್ಲಿ ಅಪಹರಿಸಲಾಗಿದ್ದು, ₹ 1 ಕೋಟಿಗೆ ಬೇಡಿಕೆ ಇಡಲಾಗಿದೆ.
ತಮಗೆ ನೆರವಾಗುವಂತೆ ಕುಟುಂಬವು ಅಧಿಕಾರಿಗಳಿಗೆ ಮನವಿ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ತಮ್ಮಲ್ಲಿ ಮಾನ್ಯ ವೀಸಾ ಇಲ್ಲದಿದ್ದರೂ ದಂಪತಿಯು ಪೋರ್ಚುಗಲ್‌ನಲ್ಲಿ ನೆಲೆಸಲು ಪ್ರಯತ್ನ ನಡೆಸಿತ್ತು. ಅದಕ್ಕಾಗಿ ಆನಂದ್ ಜಿಲ್ಲೆಯ ಏಜೆಂಟ್‌ವೊಬ್ಬರ ನೆರವು ಪಡೆದಿತ್ತು. ಆರಂಭದಲ್ಲಿ ದುಬೈಗೆ ಹಾರಿದ್ದ ಕುಟುಂಬವನ್ನು ಬಳಿಕ, ಲಿಬಿಯಾಗೆ ಕಳುಹಿಸಲಾಗಿತ್ತು ಎನ್ನಲಾಗಿದೆ.
ರಾಜ್ಯ ಸಭಾ ಸದಸ್ಯ ಮಯಂಕ್ ನಾಯಕ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ಕುಟುಂಬದ ರಕ್ಷಣೆಗೆ ಮುಂದಾಗಬೇಕು ಎಂದು ಕೋರಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಮೆಹ್ಸಾನ ಜಿಲ್ಲೆಯ ಅಧಿಕಾರಿಗಳೂ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಬದಲ್‌ಪುರ ನಿವಾಸಿ ಕಿಸ್ಮತ್ ಚಾವ್ಡ, ಪತ್ನಿ ಹಿನಾ ಮತ್ತು ಅವರ ಮೂರು ವರ್ಷದ ಮಗಳು ಒತ್ತೆಯಾಳುಗಳಾಗಿದ್ದಾರೆ. ಈ ಕುಟುಂಬ ನವೆಂಬರ್ 29ರಂದು ದುಬೈಗೆ ತೆರಳಿತ್ತು ಎಂಬುದಾಗಿ ಕೇಂದ್ರಕ್ಕೆ ಬರೆದಿರುವ ಪತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಟ್ರಾವೆಲ್ ಏಜೆಂಟ್ ಹರ್ಷಿತ್ ಕೆ. ಮೆಹ್ತಾ ಅವರು, ಕುಟುಂಬವನ್ನು ದುಬೈನಿಂದ ಪೋರ್ಚುಗಲ್‌ಗೆ ಕಳುಹಿಸುವ ಭರವಸೆ ನೀಡಿದ್ದ. ಆದರೆ, ಕುಟುಂಬಕ್ಕೆ ಗೊತ್ತಾಗದಂತೆ ದುಬೈನಿಂದ ಲಿಬಿಯಾಗೆ ಕರೆದೊಯ್ದು, ಒತ್ತೆ ಇರಿಸಿಕೊಳ್ಳಲಾಗಿದೆ.
ಬೇಡಿಕೆ ಈಡೇರಿಸಿದರಷ್ಟೇ ಕುಟುಂಬವನ್ನು ಬಿಡುಗಡೆ ಮಾಡುವುದಾಗಿ ಡಿಸೆಂಬರ್ 4ರಂದು ತಿಳಿಸಲಾಗಿದೆ.
ಅಕ್ಟೋಬರ್‌ನಲ್ಲೂ ಪ್ರಕರಣ
ಅಕ್ರಮವಾಗಿ ಆಸ್ಟ್ರೇಲಿಯಾಗೆ ತೆರಳಲು ಯತ್ನಿಸಿದ್ದ ನಾಲ್ವರು ಗುಜರಾತಿಗಳನ್ನು ಇರಾನ್‌ನಲ್ಲಿ ಅಪಹರಿಸಿದ ಪ್ರಕರಣ ಅಕ್ಟೋಬರ್‌ನಲ್ಲಿ ವರದಿಯಾಗಿತ್ತು. ಅಪಹರಣಕಾರರು, ₹ 2 ಕೋಟಿಗೆ ಬೇಡಿಕೆ ಇಟ್ಟಿದ್ದರು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ ಬಳಿಕ ಅವರೆಲ್ಲ ಸುರಕ್ಷಿತವಾಗಿ ಮರಳಿದ್ದರು.
ಏಜೆಂಟ್‌ಗಳು ಆ ನಾಲ್ವರನ್ನು – ದೆಹಲಿ, ಬ್ಯಾಂಕಾಕ್, ದುಬೈ ಮತ್ತು ಟೆಹರಾನ್ ಮಾರ್ಗವಾಗಿ ಆಸ್ಟ್ರೇಲಿಯಾಗೆ ಕಳುಹಿಸಲು ಯತ್ನಿಸಿದ್ದರು. ಆ ವೇಳೆ ಅವರನ್ನು ಅಪಹರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.