ADVERTISEMENT

ನಾನು ಕಬಡ್ಡಿ ಆಡಿದ್ದನ್ನು ವಿಡಿಯೊ ಮಾಡಿದವರು ರಾವಣರು: ಸಾಧ್ವಿ ಪ್ರಗ್ಯಾ

ಪಿಟಿಐ
Published 16 ಅಕ್ಟೋಬರ್ 2021, 8:28 IST
Last Updated 16 ಅಕ್ಟೋಬರ್ 2021, 8:28 IST
ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್
ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್   

ಭೋಪಾಲ: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆದಿರುವ ಭೋಪಾಲ ಸಂಸದೆ, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಕಬಡ್ಡಿ ಆಡುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ. ವಿಡಿಯೊ ಚಿತ್ರೀಕರಿಸಿ, ಹರಿಬಿಟ್ಟವರು ರಾವಣರು ಎಂದಿರುವ ಸಂಸದೆ ಪ್ರಗ್ಯಾ, ಅವರ ವೃದ್ಧಾಪ್ಯ ಮತ್ತು ಮುಂದಿನ ಜನ್ಮ ಹಾಳಾಗಿ ಹೋಗುತ್ತದೆ ಎಂದು ಶಪಿಸಿದ್ದಾರೆ.

ತಮ್ಮ ಸಹಾಕಯರ ನೆರವಿನೊಂದಿಗೆ, ದೀರ್ಘ ಕಾಲದಿಂದಲೂ ವ್ಹೀಲ್‌ ಚೇರ್‌ ಮೇಲೆ ಕುಳಿತೇ ಸಂಚರಿಸುವ ಪ್ರಗ್ಯಾ ಅವರು ಕಬಡ್ಡಿ ಆಡುತ್ತಿರುವ ವಿಡಿಯೊ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಇದಕ್ಕೂ ಮೊದಲು ಅವರು ಬಾಸ್ಕೆಟ್‌ ಬಾಲ್‌ ಆಡಿದ ವಿಡಿಯೊ ಮತ್ತು ನರ್ತಿಸಿದ ವಿಡಿಯೊಗಳೂ ವೈರಲ್‌ ಆಗಿದ್ದವು.

ಸಿಂಧಿ ಸಮುದಾಯದ ಪ್ರಾಬಲ್ಯವಿರುವ ಭೋಪಾಲದ ಸಂತ ನಗರ (ಬೈರಗಢ) ದಲ್ಲಿ ಶುಕ್ರವಾರ ರಾತ್ರಿ ನಡೆದ ದಸರಾ ಕಾರ್ಯಕ್ರಮದಲ್ಲಿ ಪ್ರಗ್ಯಾ ಮಾತನಾಡಿದರು. ‘ನಾನು ಎರಡು ದಿನಗಳ ಹಿಂದೆ (ದುರ್ಗಾ ಪಂಡಲ್‌ನಲ್ಲಿ) ಆರತಿ ಬೆಳಗಲು ಹೋಗಿದ್ದೆ. ಮೈದಾನದಲ್ಲಿ ಆಟವಾಡುತ್ತಿದ್ದ ಕೆಲವು ಕ್ರೀಡಾಪಟುಗಳು ನನಗೆ (ಕಬಡ್ಡಿ) ರೈಡ್‌ ಮಾಡುವಂತೆ ವಿನಂತಿಸಿದರು. ಈ ಸನ್ನಿವೇಶದ ಒಂದು ಚಿಕ್ಕ ತುಣುಕು ಸೆರೆಹಿಡಿದು ಮಾಧ್ಯಮಗಳಲ್ಲಿ ತೋರಿಸಲಾಯಿತು’ ಎಂದು ಅವರು ಹೇಳಿದರು.

ADVERTISEMENT

‘ಯಾರಾದರೂ ಅಸಮಾಧಾನಗೊಂಡಿದ್ದರೆ ಮತ್ತು ಸಿಟ್ಟಾಗಿದ್ದರೆ, ಆ ವ್ಯಕ್ತಿ ನಿಮ್ಮ ನಡುವೆ ಇರುವ ರಾವಣ ಎಂದು ಅರ್ಥ. ಸಿಂಧಿ ಸಹೋದರರಲ್ಲಿ ಯಾರೋ ಅಂಥ ಒಬ್ಬ ವ್ಯಕ್ತಿ ಇದ್ದಾರೆ. ಅವರು ನನ್ನನ್ನು ದೊಡ್ಡ ಶತ್ರುವಾಗಿ ನೋಡುತ್ತಿದ್ದಾರೆ. ಯಾಕೆ ಅಂತ ಗೊತ್ತಿಲ್ಲ. ಆತನಿಂದ ಯಾವ ಅಮೂಲ್ಯವಾದ ವಸ್ತುವನ್ನು ನಾನು ಕಸಿದುಕೊಂಡಿದ್ದೇನೋ ಗೊತ್ತಿಲ್ಲ’ ಎಂದರು.

ಆದರೆ, ರಾವಣ’ ಎಲ್ಲಿ ಬೇಕಾದರೂ ಇರಬಹುದಲ್ಲವಾ‘ ಎಂದು ಪ್ರಶ್ನಿಸಿದರು.

‘ನಾನು ಯಾರ ಬಗ್ಗೆ ಹೇಳುತ್ತಿದ್ದೀನೋ ಅವರಲ್ಲಿ ಸಂಸ್ಕಾರ ನಾಶವಾಗಿದೆ. ಅಂಥವರನ್ನು ತಿದ್ದುವ ಅಗತ್ಯವಿದೆ. ಸಂಸ್ಕಾರವನ್ನು ಕಲಿಯದಿದ್ದರೆ, ನಿಮ್ಮ ವೃದ್ಧಾಪ್ಯ ಮತ್ತು ಮುಂದಿನ ಜನ್ಮವೂ ಹಾಳಾಗುತ್ತದೆ. ದೇಶಭಕ್ತರು, ಕ್ರಾಂತಿಕಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಂತರೊಂದಿಗೆ ಹೋರಾಡಿರುವ ರಾವಣ ಅಥವಾ ಕಂಸನಾಗಲಿ ಬದುಕುಳಿದಿರುವ ಇತಿಹಾಸವಿಲ್ಲ. ಪ್ರಸ್ತುತ ಅಧರ್ಮಿ ಅಥವಾ ವಿಧರ್ಮಿ ಉಳಿಯಲೂ ಸಾಧ್ಯವಿಲ್ಲ‘ ಎಂದರು. ‘ಜನರ ಕಲ್ಯಾಣಕ್ಕಾಗಿಯೇ ನನ್ನ ತಪಸ್ಸು–ಧ್ಯಾನ’ ಎಂದೂ ಅವರು ಹೇಳಿದರು.

ಈ ವಿಡಿಯೊಗಳಿಗೆ ಸಂಬಂಧಿಸಿದಂತೆ ಸಂಸದೆ ಪ್ರಗ್ಯಾ ಅವರನ್ನು ಸಮರ್ಥಿಸಿಕೊಂಡಿರುವ ಆಕೆಯ ಸಹೋದರಿ ಉಪ್ಮಾ ಠಾಕೂರ್,‘ ಪ್ರಗ್ಯಾ ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿರುವುದು ನಿಜ. ಆದರೆ, ಆ ನೋವು ಯಾವಾಗ ಬೇಕಾದರೂ ಕಾಣಿಸಿಕೊಂಡು ತೊಂದರೆ ಕೊಡಬಹುದು’ ಎಂದು ಹೇಳಿದ್ದಾರೆ.

‘ಈ ಬೆನ್ನುನೋವು ಯಾವ ಕ್ಷಣದಲ್ಲಿ ಆಕೆಗೆ ಸಮಸ್ಯೆಗಳನ್ನು ಉಂಟು ಮಾಡುತ್ತದೆಂದು ನಿಮಗೆ ಗೊತ್ತಿಲ್ಲ. ಆಕೆ ಬಂಧನದಲ್ಲಿದ್ದಾಗ ಮಹಾರಾಷ್ಟ್ರದ ಎಟಿಎಸ್‌ನ ಅಧಿಕಾರಿಗಳು ಆಕೆಯನ್ನು ನೆಲಕ್ಕೆ ತಳ್ಳಿದ್ದರಿಂದ ಬೆನ್ನಿನ ಎಲ್‌ 4 ಮತ್ತು ಎಲ್‌5 ಮೂಳೆಗಳ ಸ್ಥಾನಪಲ್ಲಟವಾಗಿ, ಸಮಸ್ಯೆಯಾಗಿದೆ. ಬೆನ್ನು ನೋವು ಕಾಣಿಸಿಕೊಂಡಾಗ ದೇಹದ ಕೆಳಭಾಗ ಪೂರ್ಣ ಸ್ಪರ್ಶಜ್ಞಾನ ಕಳೆದುಕೊಳ್ಳುತ್ತದೆ. ಇದು ಆಕೆ ವಾಹನದಲ್ಲಿ ಕುಳಿತುಕೊಳ್ಳುವಾಗ ಅಥವಾ ಇಳಿಯುವಾಗಲೂ ಕಾಣಿಸಿಕೊಳ್ಳುತ್ತದೆ‘ ಎಂದು ಉಪ್ಮಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.