ADVERTISEMENT

ಸೀಟು ಹಂಚಿಕೆಗೆ ಕಾಂಗ್ರೆಸ್, ಎಂವಿಎ ಸಹಮತ: 'ಇಂಡಿಯಾ'ಗೆ ಪ್ರಕಾಶ್ ಅಂಬೇಡ್ಕರ್ ಪಕ್ಷ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 2:29 IST
Last Updated 10 ಜನವರಿ 2024, 2:29 IST
ಪ್ರಕಾಶ್‌ ಅಂಬೇಡ್ಕರ್‌
ಪ್ರಕಾಶ್‌ ಅಂಬೇಡ್ಕರ್‌   

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರು ಮಾತುಕತೆ ನಡೆಸಿದ್ದು, ಪ್ರಕಾಶ್ ಅಂಬೇಡ್ಕರ್‌ ನೇತೃತ್ವದ ವಂಚಿತ್ ಬಹುಜನ ಆಘಾಡಿ (ವಿಬಿಎ) ಪಕ್ಷ 'ಇಂಡಿಯಾ' ಮೈತ್ರಿಕೂಟಕ್ಕೆ ಸೇರಲು ಹಸಿರು ನಿಶಾನೆ ತೋರಿದೆ.

ಕಾಂಗ್ರೆಸ್‌ನ ರಾಷ್ಟ್ರೀಯ ಮೈತ್ರಿ ಸಮಿತಿಯು, ವಿಬಿಎ ಪಕ್ಷವನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಮತ್ತು ಎನ್‌ಸಿಪಿ ಜೊತೆ ಚರ್ಚೆ ನಡೆಸಿದೆ. ಎರಡೂ ಪಕ್ಷಗಳು ವಿಬಿಎ ಅನ್ನು ಮಹಾ ವಿಕಾಸ ಆಘಾಡಿ (ಎಂವಿಎ) ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ಸೂಚಿಸಿವೆ.

ಮಂಗಳವಾರ ಎರಡೂವರೆ ಗಂಟೆ ನಡೆದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಸೇನಾ ನಾಯಕ ಸಂಜಯ್‌ ರಾವುತ್‌, ಪ್ರತಿಯೊಂದು ಸ್ಥಾನದ ಬಗ್ಗೆಯೂ ಚರ್ಚಿಸಿದ ನಂತರ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಆದರೆ, ನಿರ್ದಿಷ್ಟವಾಗಿ ಎಷ್ಟು ಸ್ಥಾನಗಳನ್ನು ಹಂಚಿಕೊಳ್ಳಲಾಗಿದೆ ಎಂಬುದನ್ನು ಅವರು ಹೇಳಿಲ್ಲ.

ADVERTISEMENT

'ನಾವು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂಬ ಭರವಸೆ ನೀಡುತ್ತೇನೆ. ಸೀಟು ಹಂಚಿಕೆ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದ 48 ಲೋಕಸಭೆ ಕ್ಷೇತ್ರಗಳ ಪೈಕಿ ಶಿವಸೇನಾ 23ಕ್ಕೆ ಬೇಡಿಕೆ ಇಟ್ಟಿತ್ತು. ಕಾಂಗ್ರೆಸ್‌ 20ರ ಮೇಲೆ ಕಣ್ಣಿಟ್ಟಿತ್ತು. ಇದೀಗ ಪ್ರಕಾಶ್ ಅಂಬೇಡ್ಕರ್‌ ಅವರ ಪಕ್ಷವೂ ಮೈತ್ರಿಕೂಟಕ್ಕೆ ಸೇರಿರುವುದರಿಂದ ಎರಡು ಸ್ಥಾನಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ, ಶಿವಸೇನಾ ಮತ್ತು ಕಾಂಗ್ರೆಸ್‌ ತಲಾ 20 ಸ್ಥಾನಗಳಲ್ಲಿ ಹಾಗೂ ಎನ್‌ಸಿಪಿ ಮತ್ತು ವಿಬಿಎಗೆ ಉಳಿದ ಸ್ಥಾನಗಳಲ್ಲಿ ಅವಕಾಶ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದ ಮಾತುಕತೆಯೂ ಮಂಗಳವಾರ ನಡೆದಿದೆ. ಕಾಂಗ್ರೆಸ್‌ ನಾಯಕರು, ಬಿಹಾರದಲ್ಲಿ ಸೀಟು ಹಂಚಿಕೆ ಸಂಬಂಧ ಆರ್‌ಜೆಡಿ ನಾಯಕರ ಜತೆ ಭಾನುವಾರ ಹಾಗೂ ದೆಹಲಿ ಕ್ಷೇತ್ರಗಳ ಹಂಚಿಕೆಗೆ ಸಂಬಂಧಿಸಿದಂತೆ ಎಎಪಿ ನಾಯಕರೊಂದಿಗೆ ಸೋಮವಾರ ಸಭೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.