ADVERTISEMENT

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಇ.ಡಿ ವಿಚಾರಣೆಗೆ ಹಾಜರಾದ ನಟ ಪ್ರಕಾಶ್ ರಾಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2025, 7:10 IST
Last Updated 30 ಜುಲೈ 2025, 7:10 IST
<div class="paragraphs"><p>ನಟ ಪ್ರಕಾಶ್ ರಾಜ್</p></div>

ನಟ ಪ್ರಕಾಶ್ ರಾಜ್

   

ಹೈದರಾಬಾದ್‌: ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್‌ ರಾಜ್‌ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಬುಧವಾರ ಹಾಜರಾಗಿದ್ದಾರೆ.

ಪ್ರಕರಣ ಸಂಬಂಧ ನಟ ಪ್ರಕಾಶ್ ರಾಜ್ ಅವರು ತಮ್ಮ ವಕೀಲರೊಂದಿಗೆ ಹೈದರಾಬಾದ್‌ನ ಬಶೀರ್‌ಬಾಗ್‌ನಲ್ಲಿರುವ ಇ.ಡಿ ಕಚೇರಿಗೆ ಬಂದಿದ್ದು, ವಿಚಾರಣೆಗೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟ ವಿಜಯ್‌ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್‌ ರಾಜ್‌ ಸೇರಿ 29 ಖ್ಯಾತನಾಮರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ಪ್ರತ್ಯೇಕ ದಿನಾಂಕಗಳಂದು ವಿಚಾರಣೆಗೆ ಹಾಜರಾಗುವಂತೆ ಜುಲೈ 10ರಂದು ಸಮನ್ಸ್ ಜಾರಿ ಮಾಡಿತ್ತು.

ನಟಿ ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್‌, ಪ್ರಣೀತಾ ಸುಭಾಶ್‌, ಅನನ್ಯಾ ನಾಗಲ್ಲಾ, ಟಿ.ವಿ ನಿರೂಪಕಿ ಶ್ರೀಮುಖಿ ಹಾಗೂ ತೆಲಂಗಾಣದ ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳು, ಯೂಟ್ಯೂಬರ್‌ಗಳ ಹೆಸರುಗಳೂ ಪ್ರಕರಣದಲ್ಲಿ ಇವೆ.

ಈ ಆ್ಯಪ್‌ಗಳು ಅಕ್ರಮ ಬೆಟ್ಟಿಂಗ್‌ ಮತ್ತು ಜೂಜಾಟದಿಂದ ಕಾನೂನು ಬಾಹಿರವಾಗಿ ಕೋಟ್ಯಂತರ ರೂಪಾಯಿ ಗಳಿಸಿವೆ ಎಂಬ ಆರೋಪವಿದೆ ಎಂದು ಮೂಲಗಳು ಹೇಳಿವೆ.

ಐದು ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಗಮನದಲ್ಲಿಟ್ಟುಕೊಂಡು ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಯಾವ ಆ್ಯಪ್‌ಗಳು: ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳಾದ ‘ಜಂಗ್ಲಿ ರಮ್ಮಿ’, ‘ಜೀತ್‌ವಿನ್‌’, ‘ಲೋಟಸ್‌365’ ಇತ್ಯಾದಿ ಆನ್‌ಲೈನ್‌ ಬೆಟ್ಟಿಂಗ್‌ ಅಪ್ಲಿಕೇಷನ್‌ಗಳನ್ನು ಅನುಮೋದಿಸಿ, ಅವುಗಳ ಪರ ಈ ಖ್ಯಾತನಾಮರು ಪ್ರಚಾರ ನಡೆಸಿದ್ದಾರೆ. ಇದಕ್ಕಾಗಿ ಅವರು ಅಪಾರ ಹಣ ಪಡೆದಿದ್ದಾರೆ ಎಂಬ ಶಂಕೆಯಿದೆ ಎಂದು ಮೂಲಗಳು ತಿಳಿಸಿವೆ.

‘ಈ ಆ್ಯಪ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದು ಗೊತ್ತಿಲ್ಲ. ಅಲ್ಲದೆ ಅವುಗಳ ಕಾನೂನು ಬಾಹಿರ ಬೆಟ್ಟಿಂಗ್‌ ಚಟುವಟಿಕೆಗಳಲ್ಲಿ ನಾವು ಪಾಲ್ಗೊಂಡಿಲ್ಲ’ ಎಂಬುದಾಗಿ ಪ್ರಕರಣದಲ್ಲಿ ಹೆಸರಿಸಲಾಗಿರುವ ಕೆಲ ನಟರು ಈ ಹಿಂದೆಯೇ ಹೇಳಿಕೆ ನೀಡಿದ್ದರು ಎಂದು ಮೂಲಗಳು ಹೇಳಿವೆ.

‘ಈ ಪ್ರಕರಣ ಸಂಬಂಧ ಸಮಗ್ರ ತನಿಖೆ ಆರಂಭವಾಗಿದ್ದು, ಈ ಆ್ಯಪ್‌ಗಳು ಅಕ್ರಮವಾಗಿ ಗಳಿಸಿರುವ ಹಣ ಎಷ್ಟು ಎಂಬುದರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಖ್ಯಾತನಾಮರ ಹೇಳಿಕೆ ದಾಖಲಿಸಿದ ಬಳಿಕ ಪ್ರಕರಣದಲ್ಲಿ ಅವರ ಪಾತ್ರವನ್ನು ನಿರ್ಧರಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ವಿಚಾರಣೆಗೆ ರಾಣಾ ಗೈರು: ಜುಲೈ 23ರಂದು ವಿಚಾರಣೆಗೆ ಹಾಜರಾಗುವಂತೆ ನಟ ರಾಣಾ ದಗ್ಗುಬಾಟಿ ಅವರಿಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ ಮಾಡಿತ್ತು. ವಿಚಾರಣೆ ಮುಂದೂಡಲು ರಾಣಾ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಆಗಸ್ಟ್ 11ಕ್ಕೆ ಹೊಸ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.