ADVERTISEMENT

ಭೂಸ್ವಾಧೀನ | ಸಭೆಯಲ್ಲಿ ಪ್ರಕಾಶ್‌ ರಾಜ್‌ ಭಾಗಿ: ಹೊರನಡೆದ ಬಿಜೆಪಿ ಸಂಸದರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:25 IST
Last Updated 1 ಜುಲೈ 2025, 15:25 IST
ಸಪ್ತಗಿರಿ ಉಲಾಕಾ ಅವರಿಗೆ ಮನವಿ ಸಲ್ಲಿಸಿದ ಪ್ರಕಾಶ್ ರಾಜ್‌ 
ಸಪ್ತಗಿರಿ ಉಲಾಕಾ ಅವರಿಗೆ ಮನವಿ ಸಲ್ಲಿಸಿದ ಪ್ರಕಾಶ್ ರಾಜ್‌    

ನವದೆಹಲಿ: ಭೂಸ್ವಾಧೀನ ಕಾನೂನಿನ ಅನುಷ್ಠಾನದ ಕುರಿತು ಪರಿಶೀಲಿಸುತ್ತಿದ್ದ ಸಂಸದೀಯ ಸಮಿತಿಯ ಸಭೆಯು ಕೋರಂ ಕೊರತೆಯಿಂದಾಗಿ ಮಂಗಳವಾರ ಹಠಾತ್ತನೆ ಕೊನೆಗೊಂಡಿತು. ಬಹುಭಾಷಾ ನಟ ಪ್ರಕಾಶ್‌ ರಾಜ್‌ ಹಾಗೂ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಕರೆಸಿದ್ದಕ್ಕೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿ ಹೊರನಡೆದರು ಎಂದು ಮೂಲಗಳು ತಿಳಿಸಿವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಭೂ ಸಂಪನ್ಮೂಲ ಇಲಾಖೆ, ಪರಿಸರ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯಗಳು ಹಾಗೂ ಸ್ವಯಂಸೇವಾ ಸಂಘಟನೆ ಪದಾಧಿಕಾರಿಗಳಿಂದ 'ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿ ಕಾಯ್ದೆ– 2013ರ ಅನುಷ್ಠಾನ’ ಕುರಿತು ವಿಚಾರಣೆ ನಡೆಸಿ ಅಭಿಪ್ರಾಯ ಪಡೆಯಲು ನಿರ್ಧರಿಸಿತ್ತು. 

ಸಭೆಗೆ ಮುನ್ನವೇ, ಕಾಂಗ್ರೆಸ್‌ನ ಹಿರಿಯ ಸಂಸದ ಸಪ್ತಗಿರಿ ಉಲಾಕಾ ನೇತೃತ್ವದ ಸಮಿತಿಯ ಮುಂದೆ ಪಾಟ್ಕರ್ ಹಾಗೂ ಪ್ರಕಾಶ್‌ ರಾಜ್‌ ಹಾಜರಾಗಲು ಅವಕಾಶ ನೀಡಿರುವುದಕ್ಕೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಭೆ ಆರಂಭವಾದಾಗ, ಸ್ವಯಂಸೇವಾ ಸಂಘಟನೆಗಳ ಪದಾಧಿಕಾರಿಗಳು ಸಭೆಗೆ ಬರುತ್ತಿರುವ ಬಗ್ಗೆ ಉಲಾಕಾ ಅವರು ಮಾಹಿತಿ ನೀಡಿದರು. ಆಗ ಬಿಜೆಪಿ ಸಂಸದರು ಮತ್ತೊಮ್ಮೆ ಆಕ್ಷೇಪಣೆ ಸಲ್ಲಿಸಿದರು. 

‘ಗುಜರಾತ್ ಮತ್ತು ಇತರೆಡೆಗಳಲ್ಲಿ ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದ್ದ ಪಾಟ್ಕರ್ ಅವರನ್ನು ರಾಷ್ಟ್ರವಿರೋಧಿ ಮತ್ತು ಅಭಿವೃದ್ಧಿ ವಿರೋಧಿ ಎಂದು ಅವರು ಬಣ್ಣಿಸಿದರು. ಅಭಿಪ್ರಾಯ ಮಂಡಿಸಲು ಪಾಟ್ಕರ್‌ ಅವರಿಗೆ ಅವಕಾಶ ನೀಡಬಾರದು. ಸಮಿತಿಯು ಪಾಕಿಸ್ತಾನ ಪ್ರಧಾನಿಯನ್ನು ಆಹ್ವಾನಿಸುತ್ತದೆಯೇ’ ಎಂದು ಸಂಸದರೊಬ್ಬರು ಪ್ರಶ್ನಿಸಿದರು ಎಂದು ಗೊತ್ತಾಗಿದೆ. 

ಇದಕ್ಕೆ ವಿಪಕ್ಷಗಳ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಆಹ್ವಾನಿತ ವ್ಯಕ್ತಿಯ ಅಭಿಪ್ರಾಯ ಕೇಳದಿರುವುದು ಸರಿಯಲ್ಲ ಎಂದೂ ಅಭಿಪ್ರಾಯಪಟ್ಟರು. ಸಭೆ ಮುಂದುವರಿಯುತ್ತಿದ್ದಂತೆಯೇ ಬಿಜೆಪಿ ಸಂಸದರು ಹೊರ ನಡೆದರು. ಕೋರಂ ಕೊರತೆ ಇರುವ ಕಾರಣಕ್ಕೆ ಸಭೆ ಮುಂದುವರಿಯುವ ಹಾಗಿಲ್ಲ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಅಗತ್ಯ ಕೋರಂ ಇಲ್ಲದೆ ಸಭೆ ಮುಂದುವರಿಸಬಾರದು ಎಂದು ಲೋಕಸಭಾಧ್ಯಕ್ಷರ ಕಚೇರಿಯಿಂದ ನಿರ್ದೇಶನ ಬಂದಿದೆ ಎಂದು ವಿರೋಧ ಪಕ್ಷಗಳ ಕೆಲವು ಸಂಸದರು ಹೇಳಿಕೊಂಡರು.

ನಾವೇನೂ ಉಗ್ರರೇ: ಪ್ರಕಾಶ್ ರಾಜ್‌ ಪ್ರಶ್ನೆ 

‘ದೇವನಹಳ್ಳಿಯ ರೈತರ ಸಮಸ್ಯೆ ಬಗ್ಗೆ ಮಾತನಾಡಲು ಸಭೆಗೆ ಹೋಗಿದ್ದೆ. ಆದರೆ ಏಕಾಏಕಿ ಸಭೆಯನ್ನು ರದ್ದುಗೊಳಿಸಲಾಯಿತು. ನಾವೇನೂ ಉಗ್ರರೇ ಅಥವಾ ಬಾಂಬ್‌ ಹಾಕಲು ಬಂದಿದ್ದೇವಾ’ ಎಂದು ಪ್ರಕಾಶ್‌ ರಾಜ್‌ ಪ್ರಶ್ನಿಸಿದರು. 

ಸುದ್ದಿಗಾರರ ಜತೆಗೆ ಮಾತನಾಡಿದ ಅವರು ‘ಸಭೆಯಲ್ಲಿ ನಮ್ಮನ್ನು ಕೂರಿಸಿದರು. ಬಿಜೆಪಿ ಸಂಸದರು ಸಭೆಯಿಂದ ಹೊರ ನಡೆದರು. ಅವರಲ್ಲೇ ವಾಗ್ವಾದ ನಡೆಯಿತು. ನಮ್ಮ ಅಹವಾಲುಗಳನ್ನು ಆಲಿಸಲು ಅವರು ಸಿದ್ಧರಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಸಭೆಯಲ್ಲಿ ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಅವರೂ ಇದ್ದರು. ಏನಣ್ಣ ಇದು ಎಂದು ಅವರನ್ನು ಪ್ರಶ್ನಿಸಿದೆ. ಮಣ್ಣಿನ ಮಗ ಸುಮ್ಮನೆ ಕುಳಿತಿದ್ದರು. ನಾವು ಯಾರನ್ನು ನಂಬುವುದು’ ಎಂದು ಪ್ರಶ್ನಿಸಿದರು. 

‘ದೇವನಹಳ್ಳಿ ರೈತರ ಸಮಸ್ಯೆ ಬಗ್ಗೆ ಮಾತನಾಡಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಮಯಾವಕಾಶ ಕೇಳಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡುತ್ತೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ನಾಳೆಯಿಂದ ನಾನು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ. ಸರ್ಕಾರ ಸ್ಪಂದಿಸುವ ವರೆಗೆ ನಿರಂತರ ಹೋರಾಟ ಮಾಡುತ್ತೇವೆ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.