
ಕೇರಳ ಲಿಟರೇಚರ್ ಫೆಸ್ಟಿವಲ್‌ನಲ್ಲಿ ನಟ ಪ್ರಕಾಶ್‌ರಾಜ್ ಮಾತನಾಡಿದರು. ತನಿಖಾ ಪತ್ರಕರ್ತ ಜೋಸಿ ಜೋಸೆಫ್ ಇದ್ದಾರೆ
ಕೋಯಿಕ್ಕೋಡ್: ‘ಪ್ರಶ್ನಿಸುವವರ ಧ್ವನಿಯನ್ನೇ ವ್ಯವಸ್ಥಿತವಾಗಿ ಮೌನವಾಗಿಸುವ ಆಡಳಿತವು ಕೇಂದ್ರದಲ್ಲಿದೆ’ ಎಂದು ನಟ ಪ್ರಕಾಶ್‌ರಾಜ್ ಗುರುವಾರ ಇಲ್ಲಿ ಟೀಕಿಸಿದರು.
ಕೇರಳ ಸಾಹಿತ್ಯ ಉತ್ಸವ (ಕೆಎಫ್‌ಎಲ್)– 2026ರಲ್ಲಿ ಮಾತನಾಡಿದ ಅವರು, ‘ಮಾತನಾಡದಂತೆ ಬಾಯಿಗಳಿಗೆ ಬೀಗ ಹಾಕಿರುವವರು ಯಾರು’ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಮುಖ್ಯವಾಹಿನಿ ಮಾಧ್ಯಮಗಳ ನಾಚಿಕೆ ಇಲ್ಲದ ಶರಣಾಗತಿ ಮತ್ತು ಕುಂದುತ್ತಿರುವ ನ್ಯಾಯಾಂಗ ಸ್ವಾತಂತ್ರ್ಯದ ಕುರಿತಂತೆ ತನಿಖಾ ಪತ್ರಕರ್ತ ಜೋಸಿ ಜೋಸೆಫ್ ನಡೆಸಿದ ಸಂವಾದದಲ್ಲಿ ಪ್ರಕಾಶ್‌ರಾಜ್ ಭಾಗಿಯಾದರು.
‘ನಿಮ್ಮ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ’ ಎಂದು ಸಂವಾದದ ಆರಂಭದಲ್ಲೇ ಜೋಸೆಫ್ ಪ್ರಶ್ನಿಸಿದ್ದಕ್ಕೆ, ‘ನನ್ನ ಸಮಯ ವ್ಯರ್ಥ ಮಾಡಲಿಕ್ಕಾಗಿಯೇ ಪ್ರಕರಣ ದಾಖಲಿಸಿದ್ದಾರೆ. ಆದರೆ, ನಾನು ವಿಭಿನ್ನ ಎಂಬುದು ಅವರಿಗೆ ಗೊತ್ತಿಲ್ಲ. ನನ್ನನ್ನು ದೇಶದ್ರೋಹಿ, ಹಿಂದೂ ವಿರೋಧಿ, ಪೆರಿಯಾರಿಸ್ಟ್ ಎನ್ನುತ್ತಾರೆ’ ಎಂದು ಪ್ರಕಾಶ್‌ರಾಜ್ ಉತ್ತರಿಸಿದರು.
ಲಡಾಖ್‌ನ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಮತ್ತು ಹೋರಾಟಗಾರ ಉಮರ್ ಖಾಲಿದ್ ಪರವಾಗಿಯೂ ಪ್ರಕಾಶ್‌ರಾಜ್ ಮಾತನಾಡಿದರು. ಅವರ ಹೋರಾಟಗಳನ್ನು ಬೆಂಬಲಿಸಿ, ಸಮರ್ಥಿಸಿಕೊಂಡರು.
ಹಿಮಾಲಯದ ಪರಿಸರ ಉಳಿವಿಗಾಗಿ ಕಾರ್ಪೊರೇಟ್ ಹಿತಾಸಕ್ತಿ ವಿರುದ್ಧ ಸೋನಮ್ ವಾಂಗ್ಚುಕ್ ಪ್ರತಿಭಟಿಸಿದಾಗ, ಅವರನ್ನು ಬೆಂಬಲಿಸಲಿಕ್ಕಾಗಿಯೇ ಅಲ್ಲಿಗೆ ಹೋಗಿದ್ದನ್ನು ನಟ ವಿವರಿಸಿದರು.
‘ವಾಂಗ್ಚುಕ್ ಅವರನ್ನು ರಾಜಸ್ಥಾನದ ಜೈಲಿನಲ್ಲಿಡಲಾಗಿದ್ದು, ಅವರ ಪತ್ನಿಗೂ ಭೇಟಿಯ ಅವಕಾಶ ಇಲ್ಲವಾಗಿದೆ. ಆತನನ್ನು ಭಯೋತ್ಪಾದಕ ಎಂದು ಯಾರಾದರೂ ನಂಬುತ್ತಾರೆಯೇ?’ ಎಂದು ಕೇಳಿದರು.
‘ಸಿಎಎ ಪ್ರತಿಭಟನೆಯ ಸಮಯದಲ್ಲಿ ರಸ್ತೆ ನಿರ್ಬಂಧಿಸುವುದು ಯಾವಾಗ ಭಯೋತ್ಪಾದಕ ಚಟುವಟಿಕೆ ಆಯಿತು? ಅಧಿಕಾರದಲ್ಲಿ ಕುಳಿತಿರುವ ಈ ‘ಮಹಾಪ್ರಭು’ (ಪ್ರಧಾನಿ ಮೋದಿ) ಅಧಿಕಾರದಿಂದ ಕೆಳಗಿಳಿ ಎಂಬ ಪದವನ್ನೇ ಇಷ್ಟಪಡಲ್ಲ’ ಎಂದು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (ಯುಎಪಿಎ) ಬಂಧನಕ್ಕೊಳಗಾಗಿರುವ ಉಮರ್ ಖಾಲಿದ್ ಅವರನ್ನು ಸಮರ್ಥಿಸಿಕೊಂಡರು.
ಕಾನೂನು ಹಾಗೂ ನ್ಯಾಯಾಧೀಶರ ಆತ್ಮಸಾಕ್ಷಿಗೆ ಅನುಗುಣವಾಗಿ ವಿಚಾರಣೆ ನಡೆಯಬೇಕು. ಅಪರಾಧಿ ಯಾರು ಎಂಬುದರ ಆಧಾರದಲ್ಲಿ ಅಲ್ಲ.– ಪ್ರಕಾಶ್ ರಾಜ್, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.