ADVERTISEMENT

ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುಹೂರ್ತ: ನಡ್ಡಾ ಭೇಟಿಗೆ ತೆರಳಲಿರುವ ಸಾವಂತ್‌

ಪಿಟಿಐ
Published 15 ಮಾರ್ಚ್ 2022, 10:05 IST
Last Updated 15 ಮಾರ್ಚ್ 2022, 10:05 IST
ಗೋವಾದ ಹಂಗಾಮಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌
ಗೋವಾದ ಹಂಗಾಮಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌   

ಪಣಜಿ: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಐದು ದಿನ ಕಳೆದಿದ್ದರೂ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿಲ್ಲ. ಮುಂದಿನ ನಡೆಯ ಬಗ್ಗೆ ನಿರ್ಧರಿಸಲು ಹಂಗಾಮಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದು, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ, ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಆ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಮುಂದಿನ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ.

'ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲು ಇಂದು ಸಂಜೆ ದೆಹಲಿಗೆ ತೆರೆಳುತ್ತಿದ್ದೇನೆ' ಎಂದು ಸಾವಂತ್‌ ಹೇಳಿದ್ದಾರೆ. ಗೋವಾ ಬಿಜೆಪಿ ಘಟಕದ ಅಧ್ಯಕ್ಷ ಸದಾನಂದ ತಾನಾವಡೆ ಸಹ ಜೊತೆಯಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನೂ ಭೇಟಿಯಾಗುವ ಸಾಧ್ಯತೆ ಇದೆ.

ADVERTISEMENT

ಗೋವಾದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಹೊಸ ಸರ್ಕಾರ ರಚನೆಯ ಸಂಬಂಧ ಸಾವಂತ್‌ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್ ಮತ್ತು ಎಲ್‌.ಮುರುಗನ್‌ ಅವರು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಬುಧವಾರ ನಡೆಸುವ ಸಾಧ್ಯತೆ ಇದೆ. ಅಲ್ಲೇ ಶಾಸಕಾಂಗ ಪಕ್ಷದ ಮುಖಂಡ ಹಾಗೂ ಮುಂದಿನ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ.

ಹೋಳಿ ಹಬ್ಬದ ನಂತರ (ಮಾ.18) ಹೊಸ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಸದಾನಂದ ತಾನಾವಡೆ ಸೋಮವಾರ ಹೇಳಿದ್ದರು. 40 ಕ್ಷೇತ್ರಗಳ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯ (ಎಂಜಿಪಿ) ಇಬ್ಬರು ಶಾಸಕರು ಹಾಗೂ ಮೂವರು ಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್‌ 11 ಸ್ಥಾನಗಳು, ಎಂಜಿಪಿ 2 ಸ್ಥಾನಗಳು, ಎಎಪಿ 2, ಜಿಎಫ್‌ಪಿ 1, ರೆವಲ್ಯೂಷನರಿ ಗೋವನ್ಸ್‌ 1 ಹಾಗೂ ಮೂವರು ಪಕ್ಷೇತರರು ಗೆಲುವು ಪಡೆದಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಪೈಕಿ 39 ಮಂದಿ ರಾಜ್ಯಪಾಲರಾದ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ಶಾಸಕ ಗಣೇಶ್‌ ಗಾಂವ್ಕರ್‌ ಅವರಿಗೆ ಗೋವಾ ವಿಧಾನಸಭೆಯ ಹಂಗಾಮಿ ಸ್ಪೀಕರ್‌ ಆಗಿ ರಾಜ್ಯಪಾಲರು ಸೋಮವಾರ ಪ್ರಮಾಣ ವಚನ ಬೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.