ADVERTISEMENT

ಬಿಹಾರ ಚುನಾವಣೆ: ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್‌ ಸೋತಿದ್ದು ಹೇಗೆ?

ಅಭಯ್ ಕುಮಾರ್
Published 15 ನವೆಂಬರ್ 2025, 0:03 IST
Last Updated 15 ನವೆಂಬರ್ 2025, 0:03 IST
ಪ್ರಶಾಂತ ಕಿಶೋರ್‌
ಪ್ರಶಾಂತ ಕಿಶೋರ್‌   

ಪಟ್ನಾ: ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್‌ (ಪಿ.ಕೆ) ನೇತೃತ್ವದ ಜನ ಸುರಾಜ್‌ ಪಕ್ಷ ಬಿಹಾರ ವಿಧಾನಸಾಭಾ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಿದೆ. ಅದಕ್ಕೆ ಪ್ರಶಾಂತ್‌ ಅವರ ಹಲವು ನಡೆ, ನುಡಿಗಳೇ ಪ್ರಮುಖ ಕಾರಣ.

ಚುನಾವಣಾ ಅಧಿಸೂಚನೆ ಪ್ರಕಟಣೆಗೂ ಒಂದು ತಿಂಗಳು ಮುನ್ನ ವಿವಿಧ ಮಾಧ್ಯಮಗಳಿಗೆ ಹಲವು ಸಂದರ್ಶನಗಳನ್ನು ನೀಡಿದ್ದ ಪಿ.ಕೆ, ‘ಇದು ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಅವರ ಕೊನೆಯ ಅವಧಿ. ಒಂದು ವೇಳೆ ನಿತೀಶ್‌ ಅವರ ಜೆಡಿಯು ಪಕ್ಷ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದರೆ, ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ’ ಎಂದು ಘೋಷಿಸಿದ್ದರು. 

ಅತಿಯಾದ ಉತ್ಸಾಹ, ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ADVERTISEMENT

‘ಹಿಂದುಳಿದ ವರ್ಗಗಳ ಮುಖ್ಯಮಂತ್ರಿಗಳಿಂದ (ನಿತೀಶ್‌, ಲಾಲೂ) ಬೇಸತ್ತಿರುವ ಬಿಹಾರದ ಜನರಿಗೆ ಪಿ.ಕೆಯಂತಹ ಬ್ರಾಹ್ಮಣ ಮುಖ ಪರ್ಯಾಯವಾಗಲಿದೆ. ಆ ಮೂಲಕ ಮೇಲ್ಜಾತಿಯ ವೈಭವವನ್ನು ಮರಳಿ ತರಬಹುದು’ ಎಂದೂ ಅವರು ಹೇಳಿದ್ದರು.  

ಸ್ವಚ್ಛ ಸರ್ಕಾರ ನೀಡುವ ಭರವಸೆಯೊಂದಿಗೆ 2024ರ ಅಕ್ಟೋಬರ್‌ನಲ್ಲಿ ಪ್ರಶಾಂತ್‌, ಜನ ಸುರಾಜ್‌ ಪಕ್ಷವನ್ನು ಸ್ಥಾಪಿಸಿದರು. ಎಲ್ಲ 243 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಅವರು, ಯಾವುದೇ ರಾಜಕೀಯ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದರು. 

ಬಿಜೆಪಿಯ ಮಾಜಿ ಸಂಸದ ಉದಯ್‌ ಸಿಂಗ್‌ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿದರು. ಆದರೆ, ಅವರು ಅಷ್ಟು ಜನಪ್ರಿಯ ವ್ಯಕ್ತಿಯಾಗಿರಲಿಲ್ಲ. ಬಿಹಾರದ ಹೊರಗಿನವರಿಗಂತೂ ಅವರ ಬಗ್ಗೆ ಏನೂ ತಿಳಿದಿರಲಿಲ್ಲ. ಅಲ್ಲದೆ ಶಿವಸೇನಾ ಮುಖ್ಯಸ್ಥ ಬಾಳಸಾಹೇಬ್‌ ಠಾಕ್ರೆ ಅವರು ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸಿದಂತೆ, ತಾನೂ ಜನ ಸುರಾಗ್‌ ಪಕ್ಷವನ್ನು ‘ರಿಮೋಟ್‌ ಕಂಟ್ರೋಲ್‌’ ಮೂಲಕ ನಿಯಂತ್ರಿಸಬಹುದು ಎಂಬ ಭ್ರಮೆಯಲ್ಲಿ ಪಿ.ಕೆ ಇದ್ದರು. 

ವಿವಿಧ ಕ್ಷೇತ್ರ ತಜ್ಞರು, ವೈದ್ಯರು, ಎಂಜಿನಿಯರ್‌ ಸೇರಿದಂತೆ ಅನೇಕ ವೃತ್ತಿಪರರನ್ನು ಅಭ್ಯರ್ಥಿಗಳನ್ನಾಗಿಸಿದ ಪಿ.ಕೆ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಕೊಳ್ಳಲಿಲ್ಲ.

ಜತೆಗೆ, ’ಆರ್‌ಜೆಡಿಯ ತೇಜಸ್ವಿ ಯಾದವ್‌ ಎದುರು ರಾಘೋಪುರದಿಂದ ನಾನು ಸ್ಪರ್ಧಿಸಿದರೆ ತೇಜಸ್ವಿ ಸೋಲು ಖಚಿತ. ಅದೂ 2019ರಲ್ಲಿ ಅಮೇಠಿಯಲ್ಲಿ ರಾಹುಲ್‌ ಅವರಿಗಾದಂತೆ ತೇಜಸ್ವಿ ಅವರಿಗೆ ಇಲ್ಲಿ ಸೋಲಾಗುತ್ತದೆ‘ ಎಂದು ಹೇಳಿದ್ದರು.

ಆದರೆ, ಹೀಗೆ ಹೇಳಿದ ಮರು ದಿನವೇ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದರು. ಇದು ಅವರ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿತ್ತು.   

‘ಜನ ಸುರಾಗ್‌ ಪಕ್ಷದ ಸೋಲಿಗೆ ಪಿ.ಕೆಯನ್ನು ಬಿಟ್ಟರೆ ಇತರರನ್ನು ದೂಷಿಸಲು ಆಗದು. ಇತರ ರಾಜಕೀಯ ಪಕ್ಷಗಳಿಗೆ ತಂತ್ರಗಳನ್ನು ರೂಪಿಸಿದ ವ್ಯಕ್ತಿ ತನ್ನದೇ ಪಕ್ಷಕ್ಕೆ ಸರಿಯಾದ ತಂತ್ರ ರೂಪಿಸುವಲ್ಲಿ ವಿಫಲರಾಗಿದರು’ ಎಂದು ಹಿಂದಿ ರಾಷ್ಟ್ರೀಯ ನಿಯತಕಾಲಿಕೆಯ ಸಂಪಾದಕ ಗಿರಿಧರ್‌ ಝಾ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.