ADVERTISEMENT

ನಿತೀಶ್‌ ಮಾನಸಿಕ ಆರೋಗ್ಯ ಸ್ಥಿತಿ ಬಹಿರಂಗಪಡಿಸಿ: ಕಿಶೋರ್‌ ಆಗ್ರಹ

ಜನ ಸುರಾಜ್‌ ಪಕ್ಷದ ನಾಯಕ ಪ್ರಶಾಂತ್‌ ಕಿಶೋರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 14:25 IST
Last Updated 25 ಮಾರ್ಚ್ 2025, 14:25 IST
ಪ್ರಶಾಂತ್‌ ಕಿಶೋರ್‌
ಪ್ರಶಾಂತ್‌ ಕಿಶೋರ್‌   

ಶೇಖಪುರ (ಬಿಹಾರ) (ಪಿಟಿಐ): ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಮಾನಸಿಕ ಆರೋಗ್ಯದ ಕುರಿತು ವೈದ್ಯಕೀಯ ಪ್ರಕಟಣೆ ಹೊರಡಿಸುವಂತೆ ಜನ ಸುರಾಜ್‌ ಪಕ್ಷದ ನಾಯಕ ಪ್ರಶಾಂತ್‌ ಕಿಶೋರ್‌ ಮಂಗಳವಾರ ಒತ್ತಾಯಿಸಿದರು.

‘ಕಾರ್ಯಕ್ರಮಗಳಲ್ಲಿ ಮತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡದಂತೆ ನಿತೀಶ್‌ ಅವರನ್ನು ತಡೆಯಲಾಗುತ್ತಿದೆ. ಈ ಮೂಲಕ ಅವರನ್ನು  ಸಾರ್ವಜನಿಕರ ಪರಿಶೀಲನೆಯಿಂದ ದೂರ ಇರಿಸಲಾಗಿದೆ’ ಎಂದು ಅವರು ಆರೋಪಿಸಿದರು. ‘ಅದರ ನಡುವೆಯೂ ಜೆಡಿಯು ಮುಖ್ಯಸ್ಥರು ತಮ್ಮ ವಿಚಿತ್ರ ನಡವಳಿಕೆಗಳಿಂದ ಸುದ್ದಿಯಾಗುತ್ತಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.

ಚುನಾವಣಾ ಕಾರ್ಯತಂತ್ರ ನಿಪುಣರಾದ ಪ್ರಶಾಂತ್‌ ಅವರು ಜೆಡಿಯುನಲ್ಲಿ ಅಲ್ಪಕಾಲ ಕಾರ್ಯನಿರ್ವಹಿಸಿದ್ದರು. ಪಕ್ಷದ ಮುಖ್ಯಸ್ಥರ ಜತೆಗಿನ ಜಗಳದಿಂದಾಗಿ ಅವರನ್ನು ಉಚ್ಚಾಟಿಸಲಾಗಿತ್ತು.

ADVERTISEMENT

‘ಮುಖ್ಯಮಂತ್ರಿ ಅವರ ಮಾನಸಿಕ ಆರೋಗ್ಯದ ಬಗ್ಗೆ 2023ರಲ್ಲಿಯೇ ಅವರ ಆಪ್ತ ಸಹಾಯಕ ದಿವಂಗತ ಸುಶೀಲ್‌ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದರು. ಈ ಎರಡು ವರ್ಷಗಳಿಂದ ಬಿಹಾರದ ಜನ ನಿತೀಶ್‌ ಅವರ ನಡವಳಿಕೆಯನ್ನು ಗಮನಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ನಿತೀಶ್‌ ಅವರು ತನ್ನ ಸಂಪುಟದ ಸಹೋದ್ಯೋಗಿಗಳ ಹೆಸರುಗಳನ್ನು ಮರೆಯುತ್ತಿದ್ದಾರೆ. ಯಾವ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದೇನೆ ಎಂಬುದೂ ಅವರಿಗೆ ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಪಿಎಸ್‌ಸಿ ಪರೀಕ್ಷೆಗಳ ಕುರಿತ ಆಂದೋಲನಗಳ ಸಮಯದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅವರಿಗೆ ಅರಿವಿರಲಿಲ್ಲ ಎಂಬುದನ್ನು ನಾನು ಕಂಡುಕೊಂಡಿದ್ದೇನೆ’ ಎಂದು ಅವರು ವಿವರಿಸಿದರು.

‘ವೈದ್ಯಕೀಯ ಪ್ರಕಟಣೆ ಬಿಡುಗಡೆಯಾದರೆ ನಿತೀಶ್‌ ಅವರ ಮನಸ್ಸು ಎಷ್ಟು ಸ್ವಸ್ಥವಾಗಿದೆ ಎಂಬುದು ಜನರಿಗೆ ಗೊತ್ತಾಗುತ್ತದೆ. ಆದರೆ, ಇದಕ್ಕೆ ಅವರು ಒಪ್ಪುವುದಿಲ್ಲ ಎಂಬುದು ನನಗೆ ತಿಳಿದಿದೆ’ ಎಂದು ಪ್ರಶಾಂತ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.