ADVERTISEMENT

ಕಾಂಗ್ರೆಸ್‌ ಚೈತನ್ಯಕ್ಕೆ ಪ್ರಶಾಂತ್‌ ಕಿಶೋರ್‌ ಪಿಪಿಟಿ: ಏನಿದೆ ಅದರಲ್ಲಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 15:32 IST
Last Updated 22 ಏಪ್ರಿಲ್ 2022, 15:32 IST
   

ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ವದಂತಿಗಳು ದಟ್ಟವಾಗಿರುವಾಗಲೇ, ಕಾಂಗ್ರೆಸ್‌ನ ಪುನಶ್ಚೇತನಕ್ಕಾಗಿ ಅವರು ಸಿದ್ಧಪಡಿಸಿದ್ದು ಎನ್ನಲಾದ ಪಿಪಿಟಿಯ (ಪವರ್‌ ಪಾಯಿಂಟ್‌ ಪ್ರೆಸೆಂಟೇಷನ್‌) ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಗಾಂಧಿಯೇತರ ನಾಯಕರನ್ನು ಪಕ್ಷದ ಅಧ್ಯಕ್ಷರನ್ನಾಗಿಸಬೇಕು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ!

ಗಾಂಧಿಯೇತರ ಕಾಂಗ್ರೆಸ್‌ ಅಧ್ಯಕ್ಷರು ‘ಹೆಚ್ಚು ಪರಿಣಾಮವನ್ನು ಬೀರಬಲ್ಲರು’ ಎಂದು ಹೇಳಲಾಗಿದೆ. ಆದರೆ ಅಂತಹ ಆಯ್ಕೆಯ ಕಾರ್ಯಸಾಧ್ಯತೆಯು ‘ಕಷ್ಟ’ ಎಂದೂ ಹೇಳಲಾಗಿದೆ.

ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಅಳವಡಿಸಿಕೊಳ್ಳಬೇಕಾದ ಹಲವಾರು ಅಂಶಗಳನ್ನು ಪಿಪಿಟಿಯಲ್ಲಿ ನಮೂದಿಸಲಾಗಿದೆ.

ADVERTISEMENT

ಪಕ್ಷಕ್ಕಾಗಿ ಆರು ಸಂಕಲ್ಪಗಳನ್ನು ಪ್ರಶಾಂತ್‌ ತಮ್ಮ ಪಿಪಿಟಿಯಲ್ಲಿ ಸೂಚಿಸಿದ್ದಾರೆ 1.) ಜನಸಾಮಾನ್ಯರ ಆಯ್ಕೆಯ ರಾಜಕೀಯ ವೇದಿಕೆಯಾಗಿ ಹೊಸ ಕಾಂಗ್ರೆಸ್ ಅನ್ನು ರಚಿಸಬೇಕು. 2) ಪಕ್ಷದ ಪರಂಪರೆ, ಮೌಲ್ಯಗಳು ಮತ್ತು ಮೂಲ ತತ್ವಗಳನ್ನು ರಕ್ಷಿಸಬೇಕು. 3)ಜಡತ್ವದಿಂದ ವಿಮೋಚನೆ ಪಡೆಯಬೇಕು. 4) ಹಕ್ಕು ಪ್ರತಿಪಾದನೆಯಂಥ ಮನಸ್ಥಿತಿ, ಹೊಣೆಗೇಡಿತನ ಮತ್ತು ಭಟ್ಟಂಗಿತನವನ್ನು ಹೋಗಲಾಡಿಸಬೇಕು. 5) ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಂಥ ಆರೋಪಗಳಿಂದ ದೂರವಾಗಬೇಕು 6) ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಿ, ಅವರ ಧ್ವನಿಯಾಗಿ ಮತ್ತು ಅವರ ಆಕಾಂಕ್ಷೆಗಳನ್ನು ಗ್ರಹಿಸುವುದು ಪ್ರಶಾಂತ್‌ ಅವರ 6 ಸಲಹೆಗಳಾಗಿವೆ.

ಇದಿಷ್ಟೇ ಅಲ್ಲದೇ, ಪಕ್ಷಕ್ಕಾಗಿ ಐದು ಕಾರ್ಯತಂತ್ರಗಳನ್ನು ಉಲ್ಲೇಖಿಸಲಾಗಿದೆ. ನಾಯಕತ್ವ ಸಮಸ್ಯೆಯನ್ನು ಸರಿಪಡಿಸುವುದು, ಮೈತ್ರಿ ಗೊಂದಲವನ್ನು ಪರಿಹರಿಸುವುದು, ಪಕ್ಷದ ಮೂಲ ತತ್ವಗಳನ್ನುರಕ್ಷಿಸುವುದು, ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರ ಸೇನೆ ಸಿದ್ಧಪಡಿಸುವುದು, ಮಾಧ್ಯಮ ಮತ್ತು ಡಿಜಿಟಲ್ ಪ್ರಚಾರ ವ್ಯವಸ್ಥೆಯನ್ನು ಸಿದ್ಧಪಡಿಸುವುದು ಆ ಐದು ಕಾರ್ಯತಂತ್ರಗಳಾಗಿವೆ.

ಈ ಬಗ್ಗೆ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್‌ ಕಿಶೋರ್‌, ’ಅದು ಹಳೆಯ ನಕಲಿ ದಾಖಲೆಯಾಗಿದ್ದು, ಈಗಿನ ಬೆಳವಣಿಗೆಗಳಿಗೂ ಅದಕ್ಕೂ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಕಾಂಗ್ರೆಸ್‌ನಿಂದ ಈ ವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಆದರೆ, ‘ಇದು ಹಳೆಯ ಪಿಪಿಟಿ. ಹೊಸ ಆವೃತ್ತಿಯಲ್ಲಿ ಕೆಲ ಅಂಶಗಳನ್ನು ಅಳವಡಿಸಿಕೊಂಡು, ಕೆಲವನ್ನು ತೆಗೆದು ಹಾಕಲಾಗಿದೆ’ ಎಂದು ಕಾಂಗ್ರೆಸ್‌ನ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.