ಪ್ರಶಾಂತ್ ಕಿಶೋರ್
ಪಟ್ನಾ: 'ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ' ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.
'ಈ ನಿರ್ಧಾರವನ್ನು ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಂಡಿದ್ದೇನೆ. ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ' ಎಂದು ಅವರು ತಿಳಿಸಿದ್ದಾರೆ.
'ಒಂದು ವೇಳೆ ಬಿಹಾರ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷ ಗೆದ್ದರೆ ಅದು ದೇಶದಲ್ಲೇ ದೊಡ್ಡ ಪರಿಣಾಮ ಬೀರಲಿದೆ. ದೇಶದ ರಾಜಕೀಯ ದಿಶೆ ಬೇರೆ ದಿಕ್ಕಿನತ್ತ ಸಾಗಲಿದೆ' ಎಂದು ಅವರು ಹೇಳಿದ್ದಾರೆ.
'ನಾನು ಬಿಹಾರ ಚುನಾವಣೆಯ ಅಖಾಡಕ್ಕೆ ಇಳಿಯಬಾರದು ಎಂಬುದು ಪಕ್ಷದ ನಿಲುವಾಗಿದೆ. ಅದಕ್ಕಾಗಿಯೇ ರಾಧೋಪುರದಿಂದ ತೇಜಸ್ವಿ ಯಾದವ್ ವಿರುದ್ಧ ಮತ್ತೊಬ್ಬ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಇದು ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ. ನಾನು ಸ್ಪರ್ಧಿಸುವುದಾದರೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ' ಎಂದಿದ್ದಾರೆ.
ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಎನ್‌ಡಿಎ ಅಥವಾ ಇಂಡಿಯಾ ಮೈತ್ರಿಕೂಟದ ಪೈಕಿ ಯಾರಿಗೆ ಬೆಂಬಲ ನೀಡುತ್ತಾರೆ ಎಂದು ಕೇಳಿದಾಗ 'ಅತ್ರಂತ ಜನಾದೇಶ ನಿರ್ಮಾಣವಾಗುವ ಸಾಧ್ಯತೆ ಕಡಿಮೆ' ಎಂದಿದ್ದಾರೆ.
'ನಮ್ಮ ಪಕ್ಷಕ್ಕೆ 130ಕ್ಕೂ ಕಡಿಮೆ ಸೀಟುಗಳು ದೊರಕಿದರೆ ನನ್ನ ಪಾಲಿಗದು ಸೋಲು ಆಗಿರಲಿದೆ. ಒಂದು ವೇಳೆ ಪಕ್ಷ ಅತ್ಯುತ್ತಮ ಸಾಧನೆ ಮಾಡಿದ್ದಲ್ಲಿ ದೇಶದಲ್ಲಿ ಅಗ್ರ 10 ರಾಜ್ಯಗಳಲ್ಲಿ ಒಂದನ್ನಾಗಿ ಮಾಡಲಿದ್ದೇವೆ' ಎಂದು ಭರವಸೆ ನೀಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.