ADVERTISEMENT

'ಬಿಹಾರದಿಂದ ಯಾತ್ರೆ ಶುರು'-ಪ್ರಶಾಂತ್ ಕಿಶೋರ್: ಉದಯವಾಗಲಿದೆಯೇ ಹೊಸ ರಾಜಕೀಯ ಪಕ್ಷ?

​ಪ್ರಜಾವಾಣಿ ವಾರ್ತೆ
Published 2 ಮೇ 2022, 6:24 IST
Last Updated 2 ಮೇ 2022, 6:24 IST
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್   

ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಹ್ವಾನ ತಿರಸ್ಕರಿಸಿದ್ದ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ನೇರವಾಗಿ ಜನರ ಕಡೆಗೆ ತೆರಳಲು ನಿರ್ಧರಿಸಿದ್ದಾರೆ. ಪ್ರಜಾಪ್ರಭುತ್ವದ ನಿಜವಾದ ಒಡೆಯರಾದ ಜನರ ಬಳಿಗೆ ತೆರಳುತ್ತಿರುವುದಾಗಿ ಪ್ರಕಟಿಸುವ ಮೂಲಕ ರಾಜಕೀಯ ಪಕ್ಷ ಸ್ಥಾಪನೆಯ ಸೂಚನೆ ನೀಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಭಾಗಿದಾರನಾಗುವ ಹುಡುಕಾಟವು ಬಿಹಾರದಿಂದ ಶುರುವಾಗುತ್ತಿರುವುದಾಗಿ ಸೋಮವಾರ ಟ್ವೀಟಿಸಿದ್ದಾರೆ.

'ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ರೀತಿಯಲ್ಲಿ ಭಾಗಿಯಾಗುವುದಕ್ಕಾಗಿ ನಡೆಸಿದ ಹುಡುಕಾಟ ಮತ್ತು ಜನರ ಪರವಾದ ನೀತಿ ರೂಪಿಸುವಲ್ಲಿ ನೀಡಿದ ಸಹಕಾರವು ಹತ್ತು ವರ್ಷಗಳ ರೋಲರ್‌ಕೋಸ್ಟರ್‌ ರೈಡ್‌ನಂತಿತ್ತು! ನಾನು ಪಯಣದ ಪುಟ ತಿರುವುತ್ತಿದ್ದಂತೆ, ನಿಜವಾದ ಒಡೆಯರಾದ ಜನರ ಬಳಿಗೆ ಹೋಗಲು, ವಿಚಾರಗಳನ್ನು ಸರಿಯಾಗಿ ತಿಳಿಯಲು ಹಾಗೂ 'ಜನ ಸುರಾಜ್'-ಉತ್ತಮ ಜನಾಡಳಿತದ ಮಾರ್ಗದಲ್ಲಿ ಸಾಗಲು ಇದು ಸಕಾಲವಾಗಿರುವುದು ತೋರುತ್ತಿದೆ. ಅದರ ಶುರು ಬಿಹಾರದಿಂದ' ಎಂದು ಹಂಚಿಕೊಂಡಿದ್ದಾರೆ.

ADVERTISEMENT

ಬಿಹಾರದಿಂದ ಶುರು ಮಾಡುತ್ತಿರುವ ಅವರ ರಾಜಕೀಯ ಯಾತ್ರೆಯ ಮೂಲಕ ಹೊಸ ಪಕ್ಷ ಅಸ್ಥಿತ್ವಕ್ಕೆ ಬರಲಿದೆಯೇ ಅಥವಾ ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

'ಉನ್ನತಾಧಿಕಾರ ಕಾರ್ಯಪಡೆಯ ಭಾಗವಾಗಿ ಪಕ್ಷವನ್ನು ಸೇರುವಂತೆ ಹಾಗೂ ಚುನಾವಣೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಕಾಂಗ್ರೆಸ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿರುವುದಾಗಿ' ಪ್ರಶಾಂತ್‌ ಇತ್ತೀಚೆಗೆ ಟ್ವೀಟಿಸಿದ್ದರು.

ಪಶ್ಚಿಮ ಬಂಗಾಳ, ಬಿಹಾರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಪ್ರಶಾಂತ್‌ ಕಿಶೋರ್‌ ರಾಜಕೀಯ ಪಕ್ಷಗಳೊಂದಿಗೆ ಒಪ್ಪಂದದ ಅನ್ವಯ ಚುನಾವಣೆ ಕಾರ್ಯತಂತ್ರಗಳನ್ನು ರೂಪಿಸಿದ್ದರು. ಈಗ ಅವರು ಯಾವುದೇ ಪಕ್ಷವನ್ನು ಸೇರುವುದರಿಂದ ಹಿಂದೆ ಸರಿದಿದ್ದು, ಹೊಸ ರೂಪದಲ್ಲಿ ಜನರೊಂದಿಗೆ ನೇರವಾಗಿ ಬೆರೆಯುವ ಪ್ರಯತ್ನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.