ADVERTISEMENT

ಗುಡಿಸಲು ವಾಸಿ ಸೈಕಲ್‌ ಸವಾರ ಈಗ ಸಂಸದ!

ಒಡಿಶಾದ ‘ಮೋದಿ’ಗೆ ಕುಟುಂಬವೂ ಇಲ್ಲ, ಬಂಗಲೆಯೂ ಇಲ್ಲ

​ಪ್ರಜಾವಾಣಿ ವಾರ್ತೆ
Published 29 ಮೇ 2019, 1:03 IST
Last Updated 29 ಮೇ 2019, 1:03 IST
ಒಡಿಶಾದ ಬಾಲಸೋರ್‌ನ ನೂತನ ಸಂಸದ ಪ್ರತಾಪ ಚಂದ್ರ ಸಾರಂಗಿ ತಮ್ಮ ಗುರುತಿನ ಚೀಟಿ ತೋರಿಸುತ್ತಿರುವುದು
ಒಡಿಶಾದ ಬಾಲಸೋರ್‌ನ ನೂತನ ಸಂಸದ ಪ್ರತಾಪ ಚಂದ್ರ ಸಾರಂಗಿ ತಮ್ಮ ಗುರುತಿನ ಚೀಟಿ ತೋರಿಸುತ್ತಿರುವುದು   

ಬಾಲಸೋರ್: ಸರಳ ಜೀವನಶೈಲಿಯಿಂದ ಗಮನಸೆಳೆಯುತ್ತಿರುವ ಪ್ರತಾಪ ಸಿಂಗ್‌ ಸಾರಂಗಿ ಒಡಿಶಾದ ಬಾಲಸೋರ್‌ ಕ್ಷೇತ್ರದ ಬಿಜೆಪಿ ಸಂಸದ. 64 ವರ್ಷದ ಇವರು ಒಡಿಶಾದ ‘ನರೇಂದ್ರ ಮೋದಿ’ ಎಂದೇ ಪ್ರಸಿದ್ಧ.

ಇವರಿಗೆ ದೊಡ್ಡ ಮೊತ್ತದ ಆಸ್ತಿಯಿಲ್ಲ. ಬೃಹತ್‌ ಬಂಗಲೆಯಿಲ್ಲ. ನಿತ್ಯ ಸೈಕಲ್‌ನಲ್ಲಿಯೇ ಸಂಚಾರ. ಗುಡಿಸಲಿನಲ್ಲಿ ವಾಸ. ಅವಿವಾಹಿತ. ಜೊತೆಗೆ ವಾಸವಿದ್ದ ತಾಯಿ ಕಳೆದ ವರ್ಷವಷ್ಟೇ ನಿಧನರಾದರು.

ಸರಳ ಜೀವನಶೈಲಿಯಿಂದ ಸಾಮಾಜಿಕ ಜಾಲತಾಣದಲ್ಲೂ ಪ್ರಸಿದ್ಧರು. ಬಾಲಸೋರ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಡಿಯ ರವೀಂದ್ರ ಕುಮಾರ್ ಜೆನಾ ವಿರುದ್ಧ 12,956 ಮತಗಳ ಅಂತರದಿಂದ ಗೆದ್ದಿದ್ದಾರೆ.

ADVERTISEMENT

ಬಿಜೆಪಿ, ಆರ್‌ಎಸ್‌ಎಸ್ ಪರ ಕೆಲಸ ಮಾಡುವ ಸಾರಂಗಿ ಗಣ ಶಿಕ್ಷಣ ಮಂದಿರ ಯೋಜನೆಯಡಿ ಬಾಲಸೋರ್‌, ಮಯೂರ್‌ಭಂಜ್‌ ಜಿಲ್ಲೆಯಲ್ಲಿ ಬುಡಕಟ್ಟು ಜನರಿಗೆ ಸಮರ್‌ ಕರ ಕೇಂದ್ರ ಹೆಸರಿನಲ್ಲಿ ಶಾಲೆಗಳನ್ನು ತೆರೆದಿದ್ದಾರೆ.

ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಮದ್ಯಮಾರಾಟ, ಭ್ರಷ್ಟಾಚಾರ, ಅನ್ಯಾಯ, ಪೊಲೀಸ್‌ ದೌರ್ಜನ್ಯ ಪ್ರಕರಣ ವಿರುದ್ಧದ ಹಲವು ಹೋರಾಟಗಳ ನೇತೃತ್ವ ವಹಿಸಿದ್ದಾರೆ.

ದೊಡ್ಡ ಸಮಾವೇಶ, ಸಾಲು ಸಾಲು ವಾಹನಗಳಿಗೆ ಬದಲಾಗಿ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಆಟೊ ರಿಕ್ಷಾದಲ್ಲಿನ ಪ್ರಚಾರಕ್ಕೇ ಸೀಮಿತಗೊಳಿಸಿದ್ದರು. 2014ರಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದು, ಸೋತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಇವರ ಫೋಟೊ ಫೋಸ್ಟ್‌ ಮಾಡಿದಂತೆ, ಇವರನ್ನು ವ್ಯಕ್ತಿತ್ವವನ್ನು ಬಲ್ಲ ಅನೇಕರು ಇವರ ವ್ಯಕ್ತಿತ್ವ ಪರಿಚಯ ಮಾಡಿಕೊಡಲು ಆರಂಭಿಸಿತು.

ಒಬ್ಬ ಬಳಕೆದಾರರು, ‘ಇವರು ನೂತನ ಸಂಸದ. ದೆಹಲಿಗೆ ಹೋಗಲು ಬ್ಯಾಗ್‌ನಲ್ಲಿ ಬಟ್ಟೆ ಪ್ಯಾಕ್‌ ಮಾಡಿ ಕೊಳ್ಳುತ್ತಿದ್ದಾರೆ. ಇವರ ಬಳಿ ಒಂದು ಕಚ್ಚಾ ಮನೆ, ಸೈಕಲ್‌ ಇದೆ. ಬೇರೇನೂ ಇಲ್ಲ. ಕೋಟ್ಯದೀಶನ ವಿರುದ್ಧ ಜಯಗಳಿಸಿದ ಈ ಸರಳಜೀವಿಗೆ ನಮಸ್ಕಾರ’ ಎಂದು ಬರೆದುಕೊಂಡಿದ್ದರು.

ಇನ್ನೊಬ್ಬರು, ‘ಒಡಿಶಾದ ಈ ‘ನರೇಂದ್ರ ಮೋದಿ’ಗೆ ಕುಟುಂಬವಿಲ್ಲ, ಮನೆ ಇಲ್ಲ. ಇಡೀ ಬದುಕನ್ನು ದೇಶಕ್ಕಾಗಿ ಸಮರ್ಪಿಸಿದ್ದಾರೆ’ ಎಂದರೆ, ಮತ್ತೊಬ್ಬರು, ‘ಇವರ ಬಳಿ ಬಂಗ್ಲೆ ಇಲ್ಲ. ಗುಡಿಸಲಷ್ಟೇ ಇರೋದು’ ಎಂದಿದ್ದರು.

ಬಾಲಸೋರ್‌ ಜಿಲ್ಲೆಯ ಗೋಪಿನಾಥಪುರ್‌ನ ಬಡಕುಟುಂಬದಲ್ಲಿ ಜನಿಸಿದ್ದ ಪ್ರತಾಪ್‌ ಸಿಂಗ್‌ ಸಾರಂಗಿ, ಅಲ್ಲಿನ ಫಕೀರ್‌ ಮೋಹನ್‌ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಬಾಲ್ಯದಿಂದಲೂ ಅಧ್ಯಾತ್ಮದತ್ತ ಒಲವು. ಒಮ್ಮೆ ಸನ್ಯಾಸಿಯಾಗಲು ಬಯಸಿ ರಾಮಕೃಷ್ಣಮಠಕ್ಕೆ ತೆರಳಿದ್ದರು. ಇವರಿಗೆ ತಂದೆ ಇಲ್ಲ, ತಾಯಿ ಒಬ್ಬರೇ ಇದ್ದಾರೆ ಎಂಬುದನ್ನು ತಿಳಿದ ರಾಮಕೃಷ್ಣಮಠದವರು ಹೋಗಿ ತಾಯಿಯ ಕಾಳಜಿ ವಹಿಸಲು ಸಲಹೆ ಮಾಡಿದ್ದರು. ಆ ನಂತರ ಸಾರಂಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.