ADVERTISEMENT

ಮಹಾಕುಂಭ ಮೇಳ ಅಂತ್ಯ: ತ್ರಿವೇಣಿ ಸಂಗಮಕ್ಕೆ ಆಗಮಿಸುತ್ತಲೇ ಇದೆ ಭಕ್ತ ಗಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2025, 4:49 IST
Last Updated 27 ಫೆಬ್ರುವರಿ 2025, 4:49 IST
<div class="paragraphs"><p>ಮಹಾಕುಂಭ ಮೇಳ</p></div>

ಮಹಾಕುಂಭ ಮೇಳ

   

ಪಿಟಿಐ ಚಿತ್ರ

ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಪಯಾಗ್‌ರಾಜ್‌ನಲ್ಲಿ ನಡೆದ 45 ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳಕ್ಕೆ ಬುಧವಾರ ಮಹಾ ಶಿವರಾತ್ರಿಯ ಶುಭ ಸಂದರ್ಭದಲ್ಲಿ ತೆರೆಬಿದ್ದಿದೆ. ಆದರೂ ಭಕ್ತರು ಪವಿತ್ರ ಸ್ನಾನಕ್ಕಾಗಿ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮಕ್ಕೆ ಆಗಮಿಸುತ್ತಲೇ ಇದ್ದಾರೆ.

ADVERTISEMENT

ಈ ಬಗ್ಗೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಮಾನವೀಯತೆಯ 'ಮಹಾ ಯಜ್ಞ', ನಂಬಿಕೆ, ಏಕತೆ ಮತ್ತು ಸಮಾನತೆಯ ಮಹಾ ಹಬ್ಬ, ಮಹಾಕುಂಭ-2025 ಮಹಾ ಶಿವರಾತ್ರಿಯ ಪವಿತ್ರ ಸ್ನಾನದೊಂದಿಗೆ ಅದರ ಪರಾಕಾಷ್ಠೆಯತ್ತ ಸಾಗಿತು’ಎಂದು ಹೇಳಿದ್ದಾರೆ.

2025ರ ಮಹಾಕುಂಭದ ಸಮಯದಲ್ಲಿ 66 ಕೋಟಿ 21 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು ಎಂದು ಅವರು ಹೇಳಿದ್ದಾರೆ. ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಕಾಲ್ತುಳಿತದಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

‘ಇದು ವಿಶ್ವ ಇತಿಹಾಸದಲ್ಲಿ ಅಭೂತಪೂರ್ವ, ಅವಿಸ್ಮರಣೀಯವಾಗಿದೆ. ಇದು ಪೂಜ್ಯ ಸಂತರು, ಮಹಾಮಂಡಲೇಶ್ವರರು ಮತ್ತು ಧಾರ್ಮಿಕ ಗುರುಗಳ ಪವಿತ್ರ ಆಶೀರ್ವಾದದ ಪರಿಣಾಮವಾಗಿದೆ, ಈ ಮಹಾ ಸೌಹಾರ್ದ ಕೂಟವು ಇಡೀ ಜಗತ್ತಿಗೆ ದೈವಿಕ ಮತ್ತು ಭವ್ಯವಾದ ಏಕತೆಯ ಸಂದೇಶವನ್ನು ನೀಡಿದೆ’ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ತ್ರಿವೇಣಿ ಸಂಗಮದಲ್ಲಿ ನೆರೆದ ಕೋಟ್ಯಂತರ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಕುಂಭದ ಐತಿಹಾಸಿಕ ಯಶಸ್ಸನ್ನು ಶ್ಲಾಘಿಸಿದ್ದಾರೆ.

ಜನವರಿ 13ರಂದು ಮೊದಲ ಅಮೃತ ಸ್ನಾನದಿಂದ ಆರಂಭವಾದ ಮಹಾಕುಂಭಮೇಳವು ಫೆಬ್ರುವರಿ 26ರಂದು ಅಧಿಕೃತವಾಗಿ ಮುಕ್ತಾಯವಾಗಿದೆ. ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮವಾಸ್ಯೆ (ಜನವರಿ 29), ಬಸಂತ್ ಪಂಚಮಿ (ಫೆಬ್ರುವರಿ 3), ಮತ್ತು ಮಾಘಿ ಪೂರ್ಣಿಮಾದಂದು (ಫೆಬ್ರುವರಿ 12) ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.