ADVERTISEMENT

ಪ್ರಯಾಗ್‌ರಾಜ್ ಮಹಾಕುಂಭ ಮೇಳ: ವಿವಿಧ ಯೋಜನೆಗಳಿಗೆ ಇಂದು ಉದ್ಘಾಟನೆ

ಧಾರ್ಮಿಕ ವಿಧಿಗಳನ್ನು ನೆರವೇರಿಸಲಿರುವ ಪ್ರಧಾನಿ ಮೋದಿ * 3,000 ವಿಶೇಷ ರೈಲುಗಳ ಸಂಚಾರ

ಎಸ್‌.ಸಂಪತ್‌
Published 13 ಡಿಸೆಂಬರ್ 2024, 2:37 IST
Last Updated 13 ಡಿಸೆಂಬರ್ 2024, 2:37 IST
ಮಹಾ ಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ನ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ –ಪಿಟಿಐ ಚಿತ್ರ
ಮಹಾ ಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ನ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ –ಪಿಟಿಐ ಚಿತ್ರ   

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಆರಂಭವಾಗಲಿರುವ ಮಹಾಕುಂಭ ಮೇಳ- 2025ಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ರೈಲ್ವೆ ಇಲಾಖೆಯ ₹1,609 ಕೋಟಿ ಮೊತ್ತದ ವಿವಿಧ ಕಾಮಗಾರಿಗಳೂ ಸೇರಿದಂತೆ ಸುಮಾರು ₹5,500 ಕೋಟಿ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಲಿದ್ದಾರೆ. ಅಲ್ಲದೆ ಅವರು ಈ ವೇಳೆ ಮೇಳದ ಕೆಲ ಧಾರ್ಮಿಕ ವಿಧಿಗಳನ್ನೂ ನೆರವೇರಿಸಲಿದ್ದಾರೆ.

ಪ್ರಧಾನಿ ಅವರು ಶುಕ್ರವಾರ ಮಧ್ಯಾಹ್ನ 12.15ರ ಸುಮಾರಿಗೆ ಬರಲಿದ್ದು, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರೀವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಗುರುವಾರ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ಜನವರಿ 13ರಿಂದ ಮಹಾ ಕುಂಭಮೇಳ:

ADVERTISEMENT

ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಈ ಬಾರಿ ಅದು 2025ರ ಜನವರಿ 13ರಿಂದ ಫೆಬ್ರುವರಿ 26ರವರೆಗೆ ಜರುಗಲಿದೆ. 50 ದಿನಗಳವರೆಗೆ ನಡೆಯುವ ಈ ಮಹಾ ಧಾರ್ಮಿಕ ಮಹೋತ್ಸವದಲ್ಲಿ ಸುಮಾರು 15 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಸಂಬಂಧ ರೈಲ್ವೆ ಇಲಾಖೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯ ಸಿದ್ಧತಾ ಕಾರ್ಯಗಳನ್ನು ಕೈಗೊಂಡಿದೆ.

3,000 ವಿಶೇಷ ರೈಲು:

ಮಹಾ ಕುಂಭಮೇಳದ ಅವಧಿಯಲ್ಲಿ ರೈಲ್ವೆ ಇಲಾಖೆಯು 10,000 ರೆಗ್ಯುಲರ್ ರೈಲುಗಳ ಜತೆಗೆ ಹೆಚ್ಚುವರಿಯಾಗಿ 3,000 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಎಂದು ಉತ್ತರ ಮಧ್ಯ ರೈಲ್ವೆಯ ಮುಖ್ಯ ಜನ ಸಂಪರ್ಕ ಅಧಿಕಾರಿ ಶಶಿಕಾಂತ ತ್ರಿಪಾಠಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಸಿಸಿಟಿವಿ ಕಣ್ಗಾವಲು:

ಪ್ರಯಾಗ್‌ರಾಜ್ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ 9 ರೈಲು ನಿಲ್ದಾಣಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗಿದೆ. ಈ ನಿಲ್ದಾಣಗಳಲ್ಲಿ ಒಟ್ಟಾರೆ 1,186 ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಕುಂಭಮೇಳಕ್ಕೆಂದೇ ಹೊಸದಾಗಿ ಅಳವಡಿಸಿರುವ 500 ಕ್ಯಾಮೆರಾಗಳೂ ಸೇರಿವೆ. ಈ ಪೈಕಿ 100 ಕ್ಯಾಮೆರಾಗಳು ಮುಖಚಹರೆ ಗುರುತಿಸುವ ವ್ಯವಸ್ಥೆಯನ್ನು (ಎಫ್‌ಆರ್‌ಎಸ್‌) ಹೊಂದಿವೆ. ಪ್ರಯಾಣಿಕರಲ್ಲಿ ಯಾರಾದರೂ ಅಪರಾಧ ಹಿನ್ನೆಲೆಯವರು ಇದ್ದರೆ ಕೂಡಲೇ ಈ ಕ್ಯಾಮೆರಾಗಳು ಕಂಟ್ರೋಲ್ ರೂಮ್‌ಗೆ ಮಾಹಿತಿ ರವಾನಿಸುತ್ತವೆ ಎಂದು ರೈಲ್ವೆ ಸುರಕ್ಷಾ ಅಧಿಕಾರಿ ಪಿ.ಎಸ್. ಸಂದೀಪ್ ಕುಮಾರ್ ವಿವರಿಸಿದರು.

ವೇಟಿಂಗ್ ಏರಿಯಾ

‘ಕುಂಭಮೇಳಕ್ಕೆ ಬರುವ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಿದ್ದೇವೆ. ಅವರನ್ನು ಸುರಕ್ಷಿತವಾಗಿ ಮರಳಿ ಕಳುಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದಕ್ಕಾಗಿ ಪ್ರಯಾಣಿಕರಿಗೆ ವೇಟಿಂಗ್ ಏರಿಯಾಗಳನ್ನು ರೂಪಿಸಲಾಗಿದ್ದು, ಅಲ್ಲಿ ಅವರಿಗೆ ಯಾವುದೇ ತೊಂದರೆ ಆಗದಂತೆ ಮೂಲ ಸೌಕರ್ಯ ಕಲ್ಪಿಸಿದ್ದೇವೆ. ಅಲ್ಲಿ ಉಪಹಾರ, ಸಹಾಯ ಕೇಂದ್ರ, ಶೌಚಾಲಯ, ಟಿಕೆಟ್ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಯಾಗ್‌ರಾಜ್ ಜಂಕ್ಷನ್‌ನ ನಿರ್ದೇಶಕ ವಿ.ಕೆ. ದ್ವಿವೇದಿ ಮಾಹಿತಿ ನೀಡಿದರು.

ಏನೆಲ್ಲ ಉದ್ಘಾಟನೆ?

ಏಳು ರೈಲ್ವೆ ಮೇಲ್ಸೇತುವೆ ಮೂರು ಕೆಳಸೇತುವೆ ದ್ವಿಪಥ ಮಾರ್ಗ ಗಂಗಾ ನದಿಗೆ ನಿರ್ಮಿಸಿರುವ ಸೇತುವೆ ಕಲುಷಿತ ನೀರಿನ ಶುದ್ಧೀಕರಣ ಘಟಕ ಕುಡಿಯುವ ನೀರು ವಿದ್ಯುತ್‌ ಪೂರೈಕೆ ಸೇರಿದಂತೆ ಹಲವು ಯೋಜನೆಗಳು ಹನುಮಾನ್‌ ಮಂದಿರ ಸೇರಿದಂತೆ ಪ್ರಮುಖ ದೇವಾಲಯಗಳ ಕಾರಿಡಾರ್‌ಗಳನ್ನು ಪ್ರಧಾನಿ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.