ADVERTISEMENT

ತಮ್ಮ ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು ಉಲ್ಲೇಖಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2022, 18:51 IST
Last Updated 14 ಆಗಸ್ಟ್ 2022, 18:51 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ನವದೆಹಲಿ: ಭವ್ಯ ಭಾರತದ ನಿರ್ಮಾಣದಲ್ಲಿ ದೇಶದ ಯುವಜನರು ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.

ಸ್ವಾತಂತ್ರ್ಯೋತ್ಸವದ ಮುನ್ನಾದಿನ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕುವೆಂಪು ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದರು.

'ನಾನು ಅಳಿವೆ, ನೀನು ಅಳಿವೆ
ನಮ್ಮ ಎಲುಬುಗಳ ಮೇಲೆ
ಮೂಡುವುದು - ಮೂಡುವುದು
ನವ ಭಾರತ ಲೀಲೆ' –
ಎಂಬ ಕುವೆಂಪು ಅವರ ಕವನದ ಸಾಲುಗಳನ್ನು ಉಲ್ಲೇಖಿಸಿ, ಅದರಲ್ಲಿರುವ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಿದರು.

ADVERTISEMENT

‘ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಪ್ರಜಾಪ್ರಭುತ್ವ ರಾಷ್ಟ್ರವಾಗಿ ಅದು ಉಳಿಯುವುದಿಲ್ಲ ಎಂದು ವಿಶ್ವದ ಪ್ರಮುಖ ನಾಯಕರು ಹೇಳಿದ್ದರು. ಭಾರತವು ಬಡ, ಕಡಿಮೆ ಸಾಕ್ಷರತೆಯ ದೇಶ ಎಂಬುದೇ ಅವರ ಈ ಭಾವನೆಗೆ ಕಾರಣವಾಗಿತ್ತು. ಆದರೆ,ಭಾರತೀಯರಾದ ನಾವು ಅಂತಹ ನಾಯಕರ ಮಾತುಗಳನ್ನು ಸುಳ್ಳಾಗಿಸಿದೆವು. ಈಗ ಪ್ರಜಾಪ್ರಭುತ್ವ ಎಂಬುದು ನಮ್ಮ ನೆಲದಾಳಕ್ಕೆ ಇಳಿದಿರುವುದು ಮಾತ್ರವಲ್ಲ, ಸಮೃದ್ಧವಾಗಿ ಬೆಳೆದಿದೆ’ ಎಂದು ಅವರು ಹೇಳಿದ್ದಾರೆ.

‘ತುಳಿತಕ್ಕೆ ಒಳಗಾದವರಿಗೆ ಮತ್ತು ಹಿಂದುಳಿದವರಿಗೆ ಸಹಾನುಭೂತಿ ತೋರುವುದು ಇಂದಿನ ಭಾರತದ ಅಗತ್ಯವಾಗಿದೆ. ನಮ್ಮ ರಾಷ್ಟ್ರೀಯ ಮೌಲ್ಯಗಳನ್ನು ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳ ರೂಪದಲ್ಲಿ ಸೇರಿಸಲಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ಪಾಲಿಸಬೇಕು. ಆಗ ಮಾತ್ರ ದೇಶವು ಮತ್ತಷ್ಟು ಎತ್ತರಕ್ಕೆ ಹೋಗುತ್ತದೆ’ ಎಂದು ಕರೆ ನೀಡಿದ್ದಾರೆ.

‘2047ರ ವೇಳೆಗೆ ನಾವು ಭವ್ಯ ಭಾರತವನ್ನು ನಿರ್ಮಿಸಬೇಕಿದೆ. ಯುವಜನರು ದೇಶಕ್ಕಾಗಿ ತ್ಯಾಗ ಮಾಡಬೇಕು, ನಾಗರಿಕರನ್ನು ಸಬಲರನ್ನಾಗಿ ಮಾಡಬೇಕು. ಅಂಬೇಡ್ಕರ್ ಅವರ ಧ್ಯೇಯಗಳಿಗೆ ಸ್ಪಷ್ಟರೂಪವನ್ನು ನೀಡಬೇಕು’ ಎಂದು ಹೇಳಿದ್ದಾರೆ.

*

ನಾವು ಭಾರತೀಯತೆಯನ್ನು ಸಂಭ್ರಮಿಸುತ್ತಿದ್ದೇವೆ. ಭಾರತವು ಸಂಪೂರ್ಣ ವೈವಿಧ್ಯಮಯವಾಗಿದೆ. ಆದರೆ, ಏಕ ಭಾರತ–ಶ್ರೇಷ್ಠ ಭಾರತ ಎಂಬ ಧ್ಯೇಯ ನಮ್ಮೆಲ್ಲರನ್ನು ಒಗ್ಗೂಡಿಸಿದೆ.
-ದ್ರೌಪದಿ ಮುರ್ಮು, ರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.