ಜಗನ್ ಮೋಹನ್ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು
ಅಮರಾವತಿ: ಟಿಡಿಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ ಕಂಡಿದ್ದು, ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವಂತೆ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ ರೆಡ್ಡಿ ಅವರು ಆಗ್ರಹಿಸಿದ್ದಾರೆ.
‘ವೈಎಸ್‌ಆರ್‌ಸಿಪಿ ನಾಯಕರು, ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಅಕ್ರಮವಾಗಿ ಬಂಧಿಸಲಾಗುತ್ತಿದೆ. ರಾಜಕೀಯ ದೌರ್ಜನ್ಯದ ವ್ಯವಸ್ಥಿತ ಹುನ್ನಾರ ಇದು. ರಾಜಕಾರಣಿಗಳು ಮತ್ತು ನಾಗರಿಕರಿಗೆ ರಕ್ಷಣೆ ಇಲ್ಲ. ಕಾನೂನು ಸುವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದು, ಆಂಧ್ರಪ್ರದೇಶದಲ್ಲಿ ಸಂವಿಧಾನದ ಉಲ್ಲಂಘನೆಯಾಗುತ್ತಿದೆ’ ಎಂದು ‘ಎಕ್ಸ್’ನಲ್ಲಿ ಜಗನ್ ಅವರು ಆರೋಪಿಸಿದ್ದಾರೆ.
‘ಗುಂಟೂರು ಜಿಲ್ಲೆಯಲ್ಲಿ ದಲಿತ ಸಮುದಾಯದ ಪಂಚಾಯಿತಿ ಅಧ್ಯಕ್ಷರ ಮೇಲೆ ಹಲ್ಲೆ ನಡೆದಿದೆ. ಟಿಡಿಪಿ ಆಡಳಿತ ಪ್ರಶ್ನಿಸಿದ ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಮತ್ತೊಂದೆಡೆ ಖುದ್ದು ಮುಖ್ಯಮಂತ್ರಿಯೇ ದಲಿತರನ್ನು ಅಪಮಾನಿಸುತ್ತಿದ್ದಾರೆ. ಜಗನ್ ಅವರ ಬೆಂಗಾವಲು ವಾಹನಕ್ಕೆ ಸಿಲುಕಿ ಜೀವಬಿಟ್ಟ ವೈಎಸ್‌ಆರ್‌ಸಿಪಿ ಬೆಂಬಲಿಗ ದಲಿತ ಸಿಂಗಯ್ಯನನ್ನು ಶ್ವಾನಕ್ಕೆ ಹೋಲಿಸಿದ್ದರು. ಇದು ನಾಯ್ಡು ಅವರ ಜಾತಿ ನಿಂದನೆಯ ಮನೋಗುಣ ತೋರಿಸುತ್ತದೆ’ ಎಂದು ವೈಎಸ್‌ಆರ್‌ಸಿಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷ ಟಿಜೆಆರ್ ಸುಧಾಕರ ಬಾಬು ಆರೋಪಿಸಿದ್ದಾರೆ.
‘ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ರಿಯಲ್ ಎಸ್ಟೇಟ್‌ಗೆ ಆದ್ಯತೆ ನೀಡಿದ್ದಾರೆ. ದಲಿತರ ಕಲ್ಯಾಣಕ್ಕಲ್ಲ. ಕೂಡಲೇ ಸಿಂಗಯ್ಯ ಸಾವಿನ ಬಗ್ಗೆ ತನಿಖೆ ನಡೆಸಲಿ’ ಎಂದು ಸುಧಾಕರ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.