ADVERTISEMENT

ತುಟಿ ಮುಟ್ಟಿದ ಮಾತ್ರಕ್ಕೆ ಪೋಕ್ಸೊ ಅಡಿ ಅಪರಾಧವಲ್ಲ: ದೆಹಲಿ ಹೈಕೋರ್ಟ್

ಪಿಟಿಐ
Published 7 ಮಾರ್ಚ್ 2025, 14:44 IST
Last Updated 7 ಮಾರ್ಚ್ 2025, 14:44 IST
   

ನವದೆಹಲಿ: ಲೈಂಗಿಕವಾಗಿ ಪ್ರಚೋದಿಸುವಂತಹ ಕೃತ್ಯ ಎಸಗದಿದ್ದರೆ, ಬಾಲಕಿಯ ತುಟಿಯನ್ನು ಸ್ಪರ್ಶಿಸುವುದು ಅಥವಾ ಅದನ್ನು ಒತ್ತುವುದು, ಆಕೆಯ ಪಕ್ಕದಲ್ಲಿ ಮಲಗುವುದು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಹೇಳಿರುವ ‘ತೀವ್ರ ಸ್ವರೂಪದ ಲೈಂಗಿಕ ಹಲ್ಲೆ’ ಆಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಇಂತಹ ಕೃತ್ಯಗಳು ಬಾಲಕಿಯ ಘನತೆಗೆ ಧಕ್ಕೆ ಉಂಟುಮಾಡಬಹುದು. ಆದರೆ, ಸ್ಪಷ್ಟವಾದ ಅಥವಾ ತರ್ಕದ ಆಧಾರದಲ್ಲಿ ಹೇಳಬಹುದಾದ ಲೈಂಗಿಕ ಉದ್ದೇಶವು ಆ ಕೃತ್ಯಗಳಲ್ಲಿ ಇಲ್ಲವಾಗಿತ್ತು ಎಂದಾದರೆ, ಅದು ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಹೇಳಿರುವ ಅಪರಾಧ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮ ಅವರು ಹೇಳಿದ್ದಾರೆ.

ಆದರೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354ರಲ್ಲಿ ಹೇಳಿರುವ ‘ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ’ ಆಗಿರುವುದು ಪ್ರಕರಣಕ್ಕೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

12 ವರ್ಷ ವಯಸ್ಸಿನ ಬಾಲಕಿಯ ಸಂಬಂಧಿಕ ತನ್ನ ವಿರುದ್ಧ ಐಪಿಸಿಯ ಸೆಕ್ಷನ್ 354 ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ದೋಷಾರೋಪ ನಿಗದಿ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಫೆಬ್ರುವರಿ 24ರಂದು ನೀಡಿರುವ ಆದೇಶದಲ್ಲಿ ನ್ಯಾಯಮೂರ್ತಿ ಈ ಮಾತು ಹೇಳಿದ್ದಾರೆ.

ಪೋಕ್ಸೊ ಕಾಯ್ದೆಯ ಸೆಕ್ಷನ್ 10ರ ಅಡಿ ನಿಗದಿಯಾಗಿದ್ದ ದೋಷಾರೋಪದಿಂದ ಈತನನ್ನು ಕೋರ್ಟ್ ಮುಕ್ತಗೊಳಿಸಿದೆ. ‘ಐಪಿಸಿಯ ಸೆಕ್ಷನ್‌ 354ರ ಅಡಿಯಲ್ಲಿ ವಿವರಿಸಿರುವ ಅಪರಾಧ ಕೃತ್ಯವನ್ನು ಹೇಳುವ ಅಗತ್ಯ ಅಂಶಗಳು ಈ ಪ್ರಕರಣದಲ್ಲಿವೆ’ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

‘ಲೈಂಗಿಕ ಕೃತ್ಯವು ನಡೆದಿರುವ ಬಗ್ಗೆ ಬಾಲಕಿಯು ಆರೋಪ ಮಾಡಿಲ್ಲ, ಅಂತಹ ಕೃತ್ಯದ ಬಗ್ಗೆ ಆಕೆಯ ಹೇಳಿಕೆಗಳಲ್ಲಿ ಉಲ್ಲೇಖವಿಲ್ಲ... ಲೈಂಗಿಕ ಪ್ರಚೋದನೆಯ ನಡೆ ಇತ್ತು ಎಂಬ ಲವಲೇಶದ ಸೂಚನೆ ಕೂಡ ಸಂತ್ರಸ್ತೆಯ ಹೇಳಿಕೆಗಳಲ್ಲಿ ಇಲ್ಲದಿರುವಾಗ ಪೋಕ್ಸೊ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಅಪರಾಧ ನಡೆದಿದೆ ಎನ್ನಲಾಗದು’ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.