ಮನೀಷ್ ಸಿಸೋಡಿಯಾ ಹಾಗೂ ಸತ್ಯೇಂದರ್ ಜೈನ್
ನವದೆಹಲಿ: ದೆಹಲಿ ಸರ್ಕಾರದ ಶಾಲೆಗಳ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ₹2ಸಾವಿರ ಕೋಟಿ ಮೊತ್ತದ ಅವ್ಯವಹಾರದ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಪ್ರಕರಣ ದಾಖಲಿಸಲು ರಾಷ್ಟ್ರಪತಿ ಒಪ್ಪಿಗೆ ನೀಡಿದ್ದಾರೆ.
2022ರಲ್ಲಿ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ವರದಿ ಆಧರಿಸಿ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿತ್ತು. ಪ್ರಕರಣ ನಡೆದ ಸಂದರ್ಭದಲ್ಲಿ ಈ ಇಬ್ಬರು ಆರೋಪಿಗಳು ಅರವಿಂದ ಕೇಜ್ರಿವಾಲ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದರು. ಇವರು ವಿರುದ್ಧ ಎಫ್‌ಐಆರ್ ದಾಖಲಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಲಾ ತರಗತಿಗಳನ್ನು ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಿಸಲಾಗಿದ್ದು, ಅವ್ಯವಹಾರ ನಡೆದಿದೆ ಎಂದು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ವರದಿ ನೀಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹರೀಶ್ ಖುರಾನಾ ಮತ್ತು ಅಂದು ಎಎಪಿಯಲ್ಲಿದ್ದು ನಂತರ ಬಿಜೆಪಿಗೆ ಪಕ್ಷಾಂತರ ಮಾಡಿದ ಕಪಿಲ್ ಮಿಶ್ರಾ ಅವರು ದೆಹಲಿ ಸರ್ಕಾರದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಒಟ್ಟು 12,748 ತರಗತಿ ಕೊಠಡಿಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗೆ ಆಗ್ರಹಿಸಿದ್ದರು.
‘ಪ್ರತಿ ಚದರಡಿ ನಿರ್ಮಾಣಕ್ಕೆ ಸಾಮಾನ್ಯ ದರ ₹1,500 ಇದ್ದರೂ, ದೆಹಲಿ ಸರ್ಕಾರ ₹8,800ರಂತೆ ಗುತ್ತಿಗೆ ನೀಡಿದೆ. ಇದಕ್ಕಾಗಿ ₹2,892.65 ಕೋಟಿ ಖರ್ಚು ಮಾಡಿದೆ. ಇದರಿಂದ ಒಂದು ತರಗತಿ ಕೊಠಡಿಯು ₹5 ಲಕ್ಷದಲ್ಲಿ ನಿರ್ಮಿಸಬಹುದಾದ್ದನ್ನು ಎಎಪಿ ಸರ್ಕಾರವು ₹24.86 ಲಕ್ಷದಷ್ಟು ಖರ್ಚು ಮಾಡಿದೆ. ಇದರಿಂದ ತೆರಿಗೆದಾರರ ಹಣವನ್ನು ಅನಗತ್ಯವಾಗಿ ಪೋಲು ಮಾಡಲಾಗಿದೆ’ ಎಂದು ಆರೋಪಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಎಎಪಿ ಮುಖಂಡ ಸೌರಭ್ ಭಾರದ್ವಾಜ್, ‘ಬಿಜೆಪಿಯು ತನ್ನ ರಾಜಕೀಯ ದ್ವೇಷಕ್ಕೆ ಮೋಸದಾಟ ನಡೆಸುತ್ತಿದೆ. ದೆಹಲಿ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಲು ಮನಸ್ಸಿಲ್ಲದ ಬಿಜೆಪಿ, ಇಂಥ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.