ADVERTISEMENT

ಉತ್ತರ ಪ್ರದೇಶ| ಭೂವಿವಾದ ಪ್ರಕರಣ: ಅರ್ಚಕನಿಗೆ ಗುಂಡೇಟು

ಉತ್ತರ ಪ್ರದೇಶದಲ್ಲಿ ನಡೆದ ಘಟನೆ

ಪಿಟಿಐ
Published 11 ಅಕ್ಟೋಬರ್ 2020, 13:05 IST
Last Updated 11 ಅಕ್ಟೋಬರ್ 2020, 13:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೊಂಡಾ: ಭೂವಿವಾದಕ್ಕೆ ಸಂಬಂಧಪಟ್ಟ ಪ್ರಕರಣವೊಂದರಲ್ಲಿ ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಅರ್ಚಕರೊಬ್ಬರು ಗಾಯಗೊಂಡ ಘಟನೆ ಉತ್ತರಪ್ರದೇಶದ ತಿರ್ರೆ ಮನೋರಮಾ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಇಲ್ಲಿನ ರಾಮಜಾನಕಿ ಮಂದಿರದ ಅರ್ಚಕ ಅತುಲ್ ಬಾಬಾ ಅಲಿಯಾಸ್ ಸಾಮ್ರಾಟ್ ದಾಸ್ ಗುಂಡೇಟಿನಿಂದ ಗಾಯಗೊಂಡವರು.

‘30 ಎಕರೆ ಪ್ರದೇಶದಲ್ಲಿರುವ ಮಂದಿರದ ಜಾಗದ ಕುರಿತು ಅರ್ಚಕ ಮತ್ತು ಗ್ರಾಮದ ಕೆಲವರ ನಡುವೆ ವಿವಾದವಿತ್ತು. ಕೆಲ ದುಷ್ಕರ್ಮಿಗಳು ಅರ್ಚಕ ಸಾಮ್ರಾಟ್ ದಾಸ್ ಮೇಲೆ ಗುಂಡು ಹಾರಿಸಿದ್ದು, ಅವರ ಎಡಭುಜಕ್ಕೆ ತೀವ್ರವಾದ ಗಾಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ADVERTISEMENT

‘ಘಟನೆ ಸಂಬಂಧ ಮಹಾಂತ ಸೀತಾರಾಮ್ ದಾಸ್ ಅವರು ದೂರು ನೀಡಿದ್ದು, ನಾಲ್ವರ ವಿರುದ್ಧ ಕೊಲೆ ಆಪಾದನೆ ದಾಖಲಿಸಲಾಗಿದೆ. ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ದಾಸ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ದೇವಾಲಯದ ಭದ್ರತೆಗಾಗಿ ಇಬ್ಬರು ಗೃಹರಕ್ಷಕರನ್ನು ನೇಮಿಸಿದ್ದರೂ ಈ ಘಟನೆ ನಡೆದಿರುವುದಕ್ಕೆ ಗ್ರಾಮಸ್ಥರು ದುಃಖ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.