ADVERTISEMENT

2023 ಏಪ್ರಿಲ್‌ ಒಳಗೆ ಖಾಸಗಿ ರೈಲು ಕಾರ್ಯಾಚರಣೆ

ಪಿಟಿಐ
Published 2 ಜುಲೈ 2020, 17:04 IST
Last Updated 2 ಜುಲೈ 2020, 17:04 IST
   

ನವದೆಹಲಿ: ದೇಶದಲ್ಲಿ 2023ರ ಏಪ್ರಿಲ್‌ ಒಳಗೆ ಖಾಸಗಿ ರೈಲು ಕಾರ್ಯಾಚರಣೆ ಆರಂಭಗೊಳ್ಳಲಿದೆ.ವಿಮಾನ ಪ್ರಯಾಣದ ಟಿಕೆಟ್‌ಗೆ ಹೋಲಿಸಿದರೆ ರೈಲ್ವೆ ಟಿಕೆಟ್‌ ದರಗಳು ಸ್ಪರ್ಧಾತ್ಮಕವಾಗಿರಲಿವೆ ಎಂದು ರೈಲ್ವೆ ಇಲಾಖೆ ಗುರುವಾರ ತಿಳಿಸಿದೆ.

ಈ ಬಗ್ಗೆ ಆನ್‌ಲೈನ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ.ಯಾದವ್‌, ‘ಈ ಖಾಸಗಿ ರೈಲುಗಳಲ್ಲಿ ತಂತ್ರಜ್ಞಾನ ಉತ್ತಮ ಮಟ್ಟದಲ್ಲಿದ್ದು, ವೇಗವು ಹೆಚ್ಚಿರಲಿದೆ. ಸದ್ಯಕ್ಕೆ 4 ಸಾವಿರ ಕಿ.ಮೀ ಓಡಾಟ ನಡೆಸಿದ ರೈಲಿಗೆ ನಿರ್ವಹಣೆಯ ಅಗತ್ಯವಿರುತ್ತದೆ. ಖಾಸಗಿ ರೈಲುಗಳಸುಧಾರಿತ ತಂತ್ರಜ್ಞಾನದಿಂದಾಗಿ 40 ಸಾವಿರ ಕಿ.ಮೀ ಓಡಾಟದ ನಂತರ ನಿರ್ವಹಣೆ ಬೇಕಾಗಬಹುದು’ ಎಂದು ತಿಳಿಸಿದ್ದಾರೆ.

ಖಾಸಗಿ ಕಂಪನಿಗಳನ್ನು ಪರಿಚಯಿಸುವುದರಿಂದ ಬೇಡಿಕೆಯ ಮೇರೆಗೆ ರೈಲು ಸಂಚಾರವಿರುತ್ತದೆ. ಪ್ರಯಾಣಿಕರು ಕಾಯುವುದು ತಪ್ಪುತ್ತದೆ. ಮಾರ್ಗ ಹಾಗೂ ನಿಲ್ದಾಣಗಳ ನಿರ್ವಹಣೆ, ಮೂಲಸೌಕರ್ಯ, ವಿದ್ಯುತ್‌ ಶುಲ್ಕವನ್ನು ಖಾಸಗಿ ಕಂಪನಿಗಳೇ ಪಾವತಿಸುತ್ತವೆ ಎಂದು ಹೇಳಿದ್ದಾರೆ.

ADVERTISEMENT

151 ಆಧುನಿಕ ರೈಲುಗಳು 109 ಜೋಡಿಮಾರ್ಗಗಳಲ್ಲಿ ಚಲಿಸಲು ಅರ್ಹತಾ ಪತ್ರ ಒದಗಿಸುವಂತೆ ಕೆಲವು ಖಾಸಗಿ ಘಟಕಗಳು ಮನವಿ ಮಾಡಿರುವ ಬೆನ್ನಲ್ಲಿಯೇ ಈ ಘೋಷಣೆ ಹೊರಬಿದ್ದಿದೆ.

ರಾಹುಲ್‌ ಗಾಂಧಿ ಟೀಕೆ:ಖಾಸಗಿ ರೈಲುಗಳ ಸಂಚಾರಕ್ಕೆ ಅನುಮತಿ ಮಾಡಿಕೊಡುವ ಮೂಲಕ ಸರ್ಕಾರ ಬಡವರ ಸಾರಿಗೆ ವ್ಯವಸ್ಥೆಯನ್ನು ಕಸಿದುಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೈಲ್ವೆಯು ಜನಸಾಮಾನ್ಯರ ಬದುಕಿನ ಭಾಗ. ಇದನ್ನು ಅವರಿಂದ ಕಸಿಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು,ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.