ADVERTISEMENT

ಪ್ರಚಾರದಿಂದ ಉದ್ಯೋಗ ಸೃಷ್ಟಿ ಸಾಧ್ಯವೆ: ಪ್ರಿಯಾಂಕಾ ಗಾಂಧಿ ಪ್ರಶ್ನೆ

ಪಿಟಿಐ
Published 27 ಜೂನ್ 2020, 14:24 IST
Last Updated 27 ಜೂನ್ 2020, 14:24 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   

ನವದೆಹಲಿ: ಕೇವಲ ‘ಪ್ರಚಾರ’ ಮಾತ್ರದಿಂದಲೇ ಉದ್ಯೋಗ ಸೃಷ್ಟಿ ಸಾಧ್ಯವೆ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿವಾದ್ರಾ ಪ್ರಶ್ನಿಸಿದ್ದಾರೆ.

ಕೈಗಾರಿಕಾ ಸಂಸ್ಥೆಗಳ ಸಹಯೋಗದಲ್ಲಿ ಸ್ಥಳೀಯವಾಗಿ ಉದ್ಯಮಿಗಳನ್ನು ಪ್ರೋತ್ಸಾಹಿಸುವ ‘ಆತ್ಮ ನಿರ್ಭರ್‌ ಉತ್ತರ ಪ್ರದೇಶ ರೋಜಗಾರ್‌ ಅಭಿಯಾನ’ಕ್ಕೆ ಶುಕ್ರವಾರಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಅವರು ಉತ್ತರ ಪ್ರದೇಶ ಸರ್ಕಾರವನ್ನು ಶನಿವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

‘ಯೋಜನೆ ಅಡಿ ನಮೂದಿಸಲಾಗಿರುವ ಉದ್ಯೋಗ ಕ್ಷೇತ್ರಗಳು ಇಂದು ಸಮಸ್ಯೆ ಎದುರಿಸುತ್ತಿವೆ. ಸರ್ಕಾರದ ಧನ ಸಹಾಯ ಇಲ್ಲದೆ ಸ್ವಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕಷ್ಟದ ದಿನಗಳನ್ನು ಅನುಭವಿಸುತ್ತಿವೆ.ಈ ಕ್ಷೇತ್ರದ ಶೇ 62ರಷ್ಟು ಕೈಗಾರಿಕೆಗಳು ಉದ್ಯೋಗ ಕಡಿತ ಮಾಡಲಿವೆ ಮತ್ತು ಶೇ 78ರಷ್ಟು ಕೈಗಾರಿಕೆಗಳು ವೇತನ ಕಡಿತ ಮಾಡಲಿವೆ ಎಂದು ಅಂದಾಜಿಸಲಾಗಿದೆ’ ಎಂದು ಪ್ರಿಯಾಂಕಾ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಇತ್ತೀಚೆಗಷ್ಟೆ ಬುಂದೇಲ್‌ಖಂಡ್‌ನಲ್ಲಿ ವಲಸೆ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಮ್ಮ ಮುಂದಿವೆ. ಜತೆಗೆ, ಆರ್ಥಿಕ ಸಂಕಷ್ಟ ಹಾಗೂ ಉದ್ಯೋಗ ಕಳೆದುಕೊಂಡವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಕಾನ್ಪುರದಲ್ಲಿ ಬೆಳಕಿಗೆ ಬಂದಿವೆ. ಪರಿಸ್ಥಿತಿ ಹೀಗಿರುವಾಗ ಉತ್ತರ ಪ್ರದೇಶ ಸರ್ಕಾರ ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ? ಹಲವರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇಂಥ ಸಮಯದಲ್ಲಿ ಸರ್ಕಾರ ಎಲ್ಲಿ ಅಡಗಿ ಕೂತಿದೆ. ಕೇವಲ ಯೋಜನೆಗಳ ಪ್ರಚಾರದಿಂದ ಉದ್ಯೋಗ ಸೃಷ್ಟಿ ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

ಸರ್ಕಾರದ ಯಾವ ವೆಬ್‌ಸೈಟ್‌ನಲ್ಲಿ ಉದ್ಯೋಗ ಕುರಿತ ಅಂಕಿಅಂಶಗಳು ಲಭ್ಯವಿದೆ ಎಂದು ವ್ಯಂಗ್ಯವಾಡಿದ ಪ್ರಿಯಾಂಕಾ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಸತ್ಯವನ್ನು ಜನರ ಮುಂದಿಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.