ADVERTISEMENT

‘ಪ್ಯಾಲೆಸ್ಟೀನ್‌’ ಹೆಸರಿನ ಬ್ಯಾಗ್ ಧರಿಸಿ ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ!

ಪಿಟಿಐ
Published 16 ಡಿಸೆಂಬರ್ 2024, 9:43 IST
Last Updated 16 ಡಿಸೆಂಬರ್ 2024, 9:43 IST
   

ನವದೆಹಲಿ: ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ಪ್ಯಾಲೆಸ್ಟೀನ್‌’ ಎಂದು ಬರೆದಿದ್ದ ಕೈಚೀಲವನ್ನು ಸಂಸತ್ತಿಗೆ ಸೋಮವಾರ ತರುವ ಮೂಲಕ ಗಮನ ಸೆಳೆದರು. 

ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವಿನ ಯುದ್ಧದಲ್ಲಿ ಮೊದಲಿನಿಂದಲೂ ಇಸ್ರೇಲ್‌ ನಡೆಯನ್ನು ಖಂಡಿಸುತ್ತಿರುವ ಪ್ರಿಯಾಂಕಾ, ಪ್ಯಾಲೆಸ್ಟೀನ್‌ಗೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಇದರ ಭಾಗವಾಗಿಯೇ ಅವರು ಈ ವಿಶೇಷ ಕೈಚೀಲವನ್ನು ಸಂಸತ್ತಿಗೆ ತಂದರು. 

ಪ್ರಿಯಾಂಕಾ ತಂದಿದ್ದ ಚೀಲದ ಮೇಲೆ ‘ಪ್ಯಾಲೆಸ್ಟೀನ್‌’ ಎಂಬ ಬರಹ ಮತ್ತು ಲಾಂಛನದ ಚಿತ್ರ ಹಾಗೂ ಕಲ್ಲಂಗಡಿ ಹಣ್ಣಿನ ಚಿತ್ರವಿತ್ತು. ಕಲ್ಲಂಗಡಿ ಹಣ್ಣಿನ ಚಿತ್ರವು ಪ್ಯಾಲೆಸ್ಟೀನಿಯರ ಜತೆಗಿನ ಒಗ್ಗಟ್ಟನ್ನು ಸೂಚಿಸುತ್ತದೆ. 

ADVERTISEMENT

ವಯನಾಡ್‌ ಸಂಸದೆಯಾಗಿ ಆಯ್ಕೆಯಾದ ಪ್ರಿಯಾಂಕಾ ಅವರಿಗೆ ನವದೆಹಲಿಯಲ್ಲಿರುವ ಪ್ಯಾಲೆಸ್ಟೀನ್ ರಾಯಭಾರಿಯು ಕಳೆದ ವಾರ ಕರೆ ಮಾಡಿ ಅಭಿನಂದಿಸಿದ್ದರು.

ಜೂನ್‌ನಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟೀಕಿಸಿದ್ದ ಪ್ರಿಯಾಂಕಾ, ‘ಇಸ್ರೇಲ್ ಸರ್ಕಾರ ನರ ಹಂತಕನಂತೆ ಅನಾಗರಿಕವಾಗಿ ವರ್ತಿಸುತ್ತಿದೆ. ಹಿಂಸಾಚಾರ ಮತ್ತು ನರಮೇಧಗಳನ್ನು ಸಹಿಸದ ಇಸ್ರೇಲ್ ನಾಗರಿಕರು ಮತ್ತು ಪ್ರಪಂಚದ ಎಲ್ಲರೂ ಇಸ್ರೇಲ್ ನಡೆಯನ್ನು ಖಂಡಿಸಬೇಕು ಮತ್ತು ಪ್ಯಾಲೆಸ್ಟೀನ್‌ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಬೇಕು’ ಎಂದು ಹೇಳಿದ್ದರು. 

ಪ್ರಿಯಾಂಕಾ ಅವರ ನಡೆಯನ್ನು ಬಿಜೆಪಿ ಟೀಕಿಸಿದೆ.

‘ಪ್ರಿಯಾಂಕಾ ಅವರು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೊಳಗಾಗುತ್ತಿರುವ ಹಿಂದೂಗಳ ಕುರಿತು ಒಂದೇ ಒಂದು ಮಾತನ್ನೂ ಮಾಡಿಲ್ಲ. ಆದರೆ ‘ಪ್ಯಾಲೆಸ್ಟೀನ್‌’ ಬ್ಯಾಗ್ ಮೂಲಕ ನಾಟಕೀಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಟೀಕಿಸಿದ್ದಾರೆ.

 ‘ತಮ್ಮ ಈ ನಡೆಯ ಮೂಲಕ ಪ್ರಿಯಾಂಕಾ ಯಾವ ಸಂದೇಶ ನೀಡಲು ಹೊರಟಿದ್ದಾರೆ’ ಎಂದು ಪ್ರಶ್ನಿಸಿದರು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಕ್ರೈಸ್ತರ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಲು ಬಿಜೆಪಿಯವರಿಗೆ ಹೇಳಿ. ಬಾಂಗ್ಲಾದೇಶದ ಸರ್ಕಾರದೊಂದಿಗೆ ಈ ಕುರಿತು ಮಾತನಾಡಿ ದೌರ್ಜನ್ಯ ನಿಲ್ಲಿಸಲು ತಿಳಿಸಿ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.